ಎಂದೊ ಕೇಳಿದ ಒಂದು ಹಾಡನು
ನಾನು ವೀಣೆಗೆ ಕಲಿಸಿದೆ.
ಅದನೆ ನೆನೆಯುತ ನೀನು ಹಾಡಲು
ನಾನು ಜೊತೆಗೂ ನುಡುಸುದೆ.

ನೀನು ಹಾಡಿದೆ, ನಾನು ನುಡಿಸಿದೆ ;
ಹಾಡೆ ಹಾದಿಯ ತೋರಿತು.
ನಿನ್ನ ಕೊರಳಿಗೆ ನನ್ನ ಬೆರಳಿಗೆ
ಸಂಜೆ ಶುಭವನು ಕೋರಿತು.

ನೀನು ಹಾಡಿದ ರಾಗ ದಿಂಪಿಗೆ
ತಳಿರ ತೂಗಿತು ಮಾಮರ.
ದೂರ ದೂರಕೆ ಕೂಗಿ ಕೋಗಿಲೆ,
ನವಿಲು ಬೀಸಿತು ಚಾಮರ.

ಹಾಡು ಮೌನವ ಕಲಕಿ ಹಬ್ಬಿತು
ಮಂದಗಮನದ ಲಯದಲಿ.
ಗೆಜ್ಜೆದನಿಗಳು ಕೇಳಿ ಬಂದವು
ಹಚ್ಚಿಹಸಿರಿನ ಬಯಲಲಿ.

ಬಾಳ ನಲಿವೇ ಬಂದು ಹಾಡಿತು
ನಿನ್ನ ಬೆಳ್ಳಿಯ ದನಿಯಲಿ,
ಬಣ್ಣ ಬಣ್ಣದ ಬೆಳಕು ಮೂಡಿತು
ಮಣ್ಣ ಹಣತೆಯ ತುಟಿಯಲಿ.

ನೀನು ಹಾಡಿದೆ, ನಾನು ನುಡಿಸಿದೆ ;
ಹಾಡು ಕರಗಿತು ಮೆಲ್ಲಗೆ.
ಕಂಪ ಸೂಸಿತು ತಂಪು ಗಾಳಿಗೆ
ನಿನ್ನ ಹೆರಳಿನ ಮಲ್ಲಿಗೆ.

- ಕೆ. ಎಸ್. ನರಸಿಂಹಸ್ವಾಮಿಯವರು.