ಹೊಸಿಲ ಹಸೆಯನು ದಾಟಿ, ಗೆಜ್ಜೆಗಳ ಕುಣಿಸಿ
ಒಳಗೆ ಬಂದಳು ನಾಲ್ಕು ತುಂಬಿರದ ಹುಡುಗಿ;
'ಮಾವ ಮೇಜಿನ ಮೇಲೆ ಇರುವುದೇನೆ'ಂದು
ಓರೆಗಣ್ಣಿನಲವಳು ನನ್ನ ಕೇಳಿದಳು.
"ಅದೊಂದು ಹಳೆಯ ಕಥೆ ; ಹೆಸರು ಮೆರವಣಿಗೆ.
ಓದುವೆನು ಕೇಳೆ"ಎಂದು ಪುಸ್ತಕವನು ತೆರೆದೆ :
"ಹಸಿರು ದೀಪದ ಒಂಟೆ ಕಾಣಿಸಿತು ಮೊದಲು,
ಬೀದಿಯುದ್ದಕು ದೀಪಮಾಲೆಗಳು ಹೊಳೆದು.
ನೌಪತ್ತು ಕೇಳಿಸಿತು, ಗುಡುಗಿತು ನಗಾರಿ
ಕಿಕ್ಕಿರಿದ ಇಕ್ಕೆಲದ ಚಪ್ಪಾಳೆಗಳಲಿ;
ಬಳಿಕ ಆನೆಯ ಬಂಡಿ, ಕುದುರೆ, ಕಾಲಾಳು,
ಹಾಡುತ್ತ ಮುನ್ನಡೆದ ಗಾಯಕರ ಸಾಲು.
ಬಂತು ಓಲಗದೊಡನೆ ಬಳಕುತ್ತ ಮೇನ ;
ತಂಗಾಳಿಯಲಿ ತೇಲಿಬಂತು ತಿಲ್ಲಾನ."
'ಮುಂದೇನು ಬಂತೆ'ಎಂದು ಕೇಳಿದಳು ಚೆಲುವೆ ;
"ಒಂದೆರಡು ಮಳೆಯ ಹನಿ ಬಿತ್ತೆ"ಎಂದು ನುಡಿದೆ.
"ಸೊಂಡಿಲಾಡಿಸಿ ಬಂತು ಸಿಂಗರಿಸಿದಾನೆ ;
ಮಹಡಿಯಂಚಿಗೆ ಸರಿದು ನೋಡಿದೆನು ನಾನೆ.
ಚಿನ್ನದಂಬಾರಿಯಲಿ ದೊರೆ ಬಂದ, ಬಂದ!-
ಉಕ್ಕಿದುದು ಎಲ್ಲರೆದೆಯೊಳಗೆ ಆನಂದ.
ಇಲ್ಲಿಗಿದು ಮುಗಿತೆಂ"ದವನೆ ವಿರಮಿಸಿದೆ ;
ಅರ್ಥವಾಯಿತೆ ಇವಳಿಗೆಂದು ಶಂಕಿಸಿದೆ.
ಒಂಟೆ, ಆನೆ, ಕುದುರೆ - ಇವಳಿಗೂ ಗೊತ್ತು;
ನಮ್ಮೂರಿಗೊಮ್ಮೆ ಸರ್ಕಸ್ಸು ಬಂದಿತ್ತು.
ಇವಳಿಗೋಲಗ ಕೂಡ ಅಪರಿಚಿತವಲ್ಲ ;
ಅಕ್ಕನ ಮದುವೆಗಿವಳು ಹೋಗಿದ್ದಳಲ್ಲ!
ಗೊತ್ತಿರದ ಪದಗಳಿವು : ಗಾಯಕ, ನಗಾರಿ,
ನೌಪತ್ತು, ಮೇನ, ತಿಲ್ಲಾನ, ಅಂಬಾರಿ.
ಪದಗಳ ಬಿಡಿಸಿ ಅರ್ಥವನು ವಿವರಿಸಿದೆ ;
ಸ್ಪಷ್ಟವಾಗಿರಬಹುದು ಎಂದು ಭಾವಿಸಿದೆ ;
ಇವಳ ಹಿಂದೆಯೆ ನಡೆದೆ ಬಾಗಿಲಿನವರೆಗೆ.-
'ದೊರೆ' ಎಂದರೇನೆಂದು ಕೇಳಿದಳು ಕಡೆಗೆ.
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments