Input license here

ಇತ್ತೀಚಿನ ಪೋಸ್ಟ್‌ಗಳು

ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿದಾಗ

 ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿದಾಗ
ನರುಗೆಂಪು ಸುಳಿದಾಗ ಹೂಬನದಲಿ,
ಕೆರೆಯ ಏರಿಯ ಮೇಲೆ ನಾನು ಬರುತಿರುವಾಗ
ನಿನ್ನ ನೆನಪಾಗುವುದು ಸಂಜೆಯಲ್ಲಿ.

ಮೊದಲ ಸಲ ಕಂಡದ್ದು ಸೇವಂತಿಯ ನಡುವೆ
ಹತ್ತು ಹನಿ ಮಳೆ ಬಿದ್ದ ಬಳಿಕ ;
ಹೊಸತು ಚೈತನ್ಯ ನನ್ನೊಳಗೆ ಹರಿದಾಡುತ್ತ
ಹೊಸ ಹಾಡು ಹುಟ್ಟಿತ್ತು ಜೀವನದಲಿ.

ಸಂಜೆಗೆಂಪಿನ ನಡುವೆ ನನ್ನ ಹತ್ತಿರ ಬಂದ
ನಿನ್ನ ಕೇಳಿದೆ ನಾನು "ಏನು ಹೆಸರು ?"
"ನನಗೆ ತಿಳಿಯದು" ಎಂದು ನಕ್ಕು ಓಡಿದೆ ನೀನು,
ನಿನ್ನ ಉತ್ತರವಿತ್ತು ಕಣ್ಣಿನಲ್ಲೆ.

ಸಂಕೋಚವಿತ್ತು, ನಾಚಿಕೆಯಿತ್ತು ನಿನ್ನೊಳಗೆ-
ಅರ್ಥವಾಯಿತು ನನಗೆ ನಿನ್ನ ಪಾಡು ;
ಇದರೊಳಗೆ ಏನಿದೆ ರಹಸ್ಯ , ನಕ್ಕೆನು ನಾನು,
ನನಗೆ ನೀನೇ ಒಂದು ಒಲುಮೆ ಹಾಡು !

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments