ಸಂಜೆಗತ್ತಲೆಯಲ್ಲಿ ನಾನು ನಿಂತಿದ್ದೇನೆ,
ಗೋಧೂಳಿಯಲ್ಲಿ. ಬಾಂದಳದ ಸೀಮಾರೇಖೆ
ಕೆಂಪಾಗಾಗಿದೆ. ಕರೆಯುತ್ತಿದೆ ಬಾನು, ಬುವಿ
ಕೂಡುವುದೆ ಇಲ್ಲ ; ನಾನು ಸರಿದಂತೆ ಸರಿಯುವುದು
ಕಿತ್ತಳೆಯ ಹಣ್ಣ ಬಣ್ಣದ ಬೆಳಕ ಚೆಲ್ಲುತ್ತ.
ಎಲ್ಲಿಂದಲೊ ಕೇಳಿಬಂತು ಯಾವುದೊ ಹಾಡು,
ಶತಕೋಟಿ ನಕ್ಷತ್ರಗಳ ಚೆಲ್ಲಿದಾಕಾಶದಲಿ.
ನಾನೊಂಟಿಯಾಗಿ ನಿಂತಿದ್ದೇನೆ ನಗುನಗುತ,
ಬಳಿಗೆ ಬಂದಳು ಚೆಲುವೆ ಹೊಸಪತ್ತಲವನುಟ್ಟು.
ನನ್ನ ಸುತ್ತಲು ಇದ್ದ ಮಂದಿ ಎತ್ತಲೊ ಹೋಗಿ
ಮೌನ ಆವರಿಸಿದೆ ; ಕನವರಿಸುತಿದೆ ಪೃಥ್ವಿ.
ಬೀದಿ ದೀಪದ ಕೆಳಗೆ 'ಚೆಲುವ ಹಾಡುವುದಿಲ್ಲ
ನೀವೇಕೆ?' ಎಂದವರು ಹೊರಟು ಹೋಗಿದ್ದಾರೆ ;
'ಹಾಡಿದವಳೂ ನಾನೆ' ಎನ್ನುತಿದೆ ನಿನ್ನೊಲವು.
ಹೊಳೆಯಂಚಿನಲ್ಲಿ ನಿಂತಿದ್ದೇನೆ ನಗುನಗುತ,
ಚೆಲುವು ಕಂಡಿದ್ದೇನೆ ನನ್ನ ಕಣ್ಣ ತುಂಬ.
ಕೆಂಪು ತಾವರೆಗಳಲಿ ನಡೆದು ಬರುತಿದೆ ಒಲವು ;
ನಾನು ಕೇಳಿದ್ದೇನೆ -' ಯಾರದೀ ಚೆಲುವೆ'ಂದು?
ಉತ್ತರವೆ ಇಲ್ಲ. ಸಣ್ಣ ದನಿಯಲ್ಲಿವಳು
ಹಾಡುವುದ ಕೇಳಿಹೆನು. ಪುಟವ ತೆರೆದಿದೆ ಹಳೆಯ
ಪುಸ್ತಕಗಳಂಚಿನಲಿ ದೇಶಕಾಲಾತೀತ
ಚೆಲುವು ಕಣ್ಮಿಂಚಿನಲಿ. ಗಾಳಿ ಬೀಸುತ್ತಲಿದೆ
ನೀಲಿಯಾಕಾಶದಲಿ. ಕೈ ಬೀಸಿ ಕರೆಯುತಿದೆ
ನನ್ನೊಲವು. ಕೇಳಿ ಬರುತಿದೆ ಜನ್ಮಜನ್ಮಾಂತರದ
ಹಾಡು. ದೂರ ಪರ್ವತಗಳಲಿ ಧಾರೆ ಧಾರೆ...
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments