ತಂಬೂರಿಯ ಮುಸುಕಿನಲ್ಲಿ
ಅಡಗಿದೆ ಸಂಗೀತ,
ಮೊಸರಿಲ್ಲವೆ ಹಾಲಿನಲ್ಲಿ
ಕಡೆದರೆ ನವನೀತ.

ಕೆರೆ ಬತ್ತಿದೆ, ಜನ ಸತ್ತಿದೆ
ಬೀಸುತ್ತಿದೆ ಗಾಳಿ,
ಬಿರುಗಾಳಿಯು ಬೀಸುತ್ತಿದೆ
ಕೆನ್ನಾಲಗೆ ಕಾಳಿ.

ಹಾಡಿಲ್ಲದ ಕೋಗಿಲೆಗಳು
ಮಾಂದಳಿರಿನ ಹಿಂದೆ,
ತಬ್ಬಲಿಗಳು ಕೇಳುತ್ತಿವೆ
'ನಮಗಿಲ್ಲವೆ ತಂದೆ?'

ಉತ್ತರದಲಿ ತಲೆಯೆತ್ತಿದೆ
ಹಿಮಪರ್ವತ ಮಾಲೆ,
ಹೊಸ ಹಕ್ಕಿಯು ಕುಳಿತಂತಿದೆ
ಹಳೆ ಬಂಡೆಯ ಮೇಲೆ.

ಬಂಗಾರದ ತೊಟ್ಟಿಲಲ್ಲಿ
ಬಡಮಗುವಿದೆ ನೋಡು,
ಸುಖವೇನಿದೆ ಪ್ರಾಯದಲ್ಲಿ
ಬಂದಂತೆಯ್ ಹಾಡು.

ಕಡಲಲ್ಲಿದೆ ಬಲು ಹಿಂಅದೆಯೆ
ಮುಳುಗಿದೊಂದು ಹಡಗು,
'ಮೇಲೇನಿದೆ'?- ಕೇಳುತ್ತಿದೆ
ಹೋಸ ಕಾಲದ ಬೆಡಗು.

ಹಸಿರಾಗಿದೆ ಭೂಮಿಯ ಮೈ
ಹಸಿವಾದರು ಅದಕ್ಕೆ,
ನರ್ತಿಸುತಿದೆ ಥಕ ಥಕ ಥೈ
ಏನಾಗಿದೆನೊ ಅದಕೆ!

ಉಣ್ಣಲು ಕೊಡು, ಕುಡಿಯಲು ಕೊಡು
ಎನ್ನುತ್ತಿದೆ ಭೂಮಿ,
ಹೊಸ ಹಾಡನು ಹಾಡುತ್ತಿದೆ-
'ಕವನ ಬೇಕೆ ಸ್ವಾಮಿ?'

- ಕೆ. ಎಸ್. ನರಸಿಂಹಸ್ವಾಮಿಯವರು.