ಮಳಿ ನಿಂತಿತ್ತು. ಹೂ ಅರಳಿತ್ತು
ತಣ್ಣಗೆ ಬೀಸಿತು ಗಾಳಿ ;
ಎಲ್ಲರ ಎದೆಯಲಿ ಸಂತಸವಿತ್ತು
ಪ್ರ್‍ಏಮಗೀತೆಯನು ಕೇಳಿ.
ದಾರಿಯ ಉದ್ದಕು ಶಾಲೆಯ ಮಕ್ಕಳು
ಬಂದರು ನಗುನಗುತ ;
ತಣ್ಣನೆ ನೆರಳಲಿ ನಡೆಯುತ್ತಿತ್ತು
ಸುಂದರಾಂಗಿಯರ ಕುಣಿತ.
ಕಬ್ಬಿನ ಗದ್ದೆಯ ಒಳಗೂ ಹೊರಗೂ
ಕುಣಿಯುವ ನವಿಲಿನ ಕೇಕೆ ;
ನಕ್ಕರು ಎಲ್ಲರು, ಈಕೆ ಕೇಳಿದಳು
'ಎಲ್ಲರು ನಗುವುದು ಏಕೆ?'
ಗುಡಿಗೋಪುರಗಳ ಎತ್ತರದಲ್ಲಿ
'ಕೃಷ್ಣಾ' ಎಂದಿತು ಗರುಡ ;
ಮೆಟ್ಟಿಲಿನುದ್ದಕು ಕೈಯ ಚಾಚಿದನು
ಕಾಸಿನ ಭಿಕ್ಷಕೆ ಕುರುಡ.
ಇರುಳೂ ಮುಗಿಯಿತು, ಬೆಳಕೂ ಹರಿಯಿತು
ಇದು ಭಗವಂತನ ಕರುಣೆ ;
ದೇವರ ಮನೆಯಲಿ ನಡೆಯುತ್ತಿತ್ತು
ಭಗವನ್ನಾಮ ಸ್ಮರಣೆ.
ತಾವರೆ ಅದಳಿದೆ, ನೈದಿಲೆ ಬಾಡಿದೆ
ಭಟ್ಟರ ತೋಟದ ಕೊಳದಲ್ಲಿ ;
ಸಿರಿಸಂತೋಷವು ಹಬ್ಬುತ್ತಲೆ ಇದೆ
ಚೆಲುವು ಚಿಮ್ಮುತಿಹ ನೆಲದಲ್ಲಿ.
ಬೀದಿ ಬೀದಿಯಲು ಶಾಂತಿಯು ನೆಲಸಿದೆ
ನೆಮ್ಮದಿ ಕಂಡಿದೆ ಬದುಕು ;
ಬಾಗಿಲ ಬಳಿ ಕವಿ ಕೈಯನು ಮುಗಿಯುವೆ
ಆದಕೂ ಇದಕೂ ಎದಕು.
-ಕೆ ಎಸ್ ನರಸಿಂಹಸ್ವಾಮಿಯವರು.
0 Comments