ಹಣ್ಣು ಹೂವುಗಳಿಂದ ನಿನ್ನನರ್ಚಿಸಲರಿಯೆ,
ಕ್ಷೀರಾಭಿಷೇಕವನು ಮಾಡಲಾರೆ;
ಸಂಜೆ ಮುಂಜಾನೆಯಲಿ ನಿನ್ನ ನೆನೆಯುವುದೊಂದೆ
ಕರ್ತವ್ಯವೆಂಬುದನು ನಾನು ಬಲ್ಲೆ.
ಶಂಖಗಳ ನಾನೂದೆ, ಜಾಗಟೆಯಾ ಬಾಜಿಸೆನು
ಮಂಗಳಾರತಿಯ ನಾ ಬೆಳಗಲರಿಯೆ;
ನಿನ್ನ ನೆತ್ತಿಯ ಮೇಲೆ ಸೀಯಾಳವನು ಸುರಿದು
ಕರವಸ್ತ್ರದಿಂದದನು ಒರೆಸೆ ನಾನು.
ಶಾಲ್ಯಾನ್ನ ಭೋಜನವ ನಾನು ಒದಗಿಸಲಾರೆ,
ನಿನ್ನ ಪ್ರಸಾದವನು ಹಂಚಲಾರೆ;
ಬತ್ತಲೆಯ ಮೂಲ ಮೂರ್ತಿಯನು ಕಾಣುವೆ ನಾನು,
ಉತ್ಸವದ ಮೂರ್ತಿಯನು ಹೊಗಳಲಾರೆ.
ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು,
ಕಾಣುವುದು ಎಲ್ಲೆಲ್ಲು ವಿಶ್ವರೂಪ;
ಕಷ್ಟದಲಿ ನೀನೆನ್ನ ಕೈಬಿಟ್ಟೆನೆನ್ನದೆಯೆ
ಭಜಿಸುವೆನು, ನನಗಿಲ್ಲ ಇಷ್ಟು ಕೋಪ.
ಕೊನೆಯಿರದ ದಾರಿಯಲಿ ನಾನು ಮುಂಬರಿಯುತ್ತ
ನಿನ್ನ ನೆನೆಯುತ್ತೇನೆ ಭಕ್ತಿಯಲ್ಲಿ;
ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹುದು,
ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments