Input license here

ಇತ್ತೀಚಿನ ಪೋಸ್ಟ್‌ಗಳು

ಕಂಡ ಕಂಡ ಕಡೆ

 ಕಂಡ ಕಂಡ ಕಡೆ
ಸೊಂಡಿಲ ಚಾಚುವ
ಆನೆಗೆ ಅಂಕುಶವಿಲ್ಲಾ
ಕಾಡು ಕುದುರೆಗಳ
ದೂಡಿದ ರಥಕ್ಕೆ
ದಾರಿಯ ಹಂಗಿಲ್ಲಾ

ಇಷ್ಟು ದೀಪಗಳು
ಸುತ್ತಲು ಉರಿದು
ಕತ್ತಲು ತಪ್ಪಿಲ್ಲಾ
ಎಷ್ಟು ಗುಡಿಸಿದರು
ದಿನವು ಮನೆಯನು
ಪೊರಕೆಗೆ ಬಿಡುವಿಲ್ಲಾ

ಕರಡು ಪ್ರತಿಗಳನು
ಯಾರು ತಿದ್ದಿದರು
ಕುರುಡಿಗೆ ಕೊನೆಯಿಲ್ಲಾ
ಎಷ್ಟು ಉಜ್ಜಿದರು
ಕಾಲ ಬುಡಕ್ಕೆ
ಗೆದ್ದಲು ಬಿಡಲಿಲ್ಲ

ತಿರುಗು ಚಕ್ರಗಳ
ನಿಶ್ಚಲ ಕೇಂದ್ರದಿ
ನಿಲ್ಲುವ ಬಲವಿಲ್ಲಾ
ಮೊರೆಯುವ ಅರೆಯುವ
ಬದುಕನ್ನೆದುರಿಸಿ
ಗೆಲ್ಲುವ ಛಲವಿಲ್ಲ

ಪಾಚಿಗಟ್ಟಿರುವ
ಕುರುಡು ದಾರಿಯಲಿ
ಜಾರಿಕೆ ತಪ್ಪಿಲ್ಲಾ
ದಾರಿ ಉದ್ದಕು
ಸೋಲಿನ ಹಾಡಿಗೆ
ಎಂದೂ ಮುಗಿವಿಲ್ಲಾ

-ಜಿ. ಎಸ್. ಶಿವರುದ್ರಪ್ಪ

Post a Comment

0 Comments