ರಾಗಿ ತಂದೀರೊ...
ರಾಗಿ ತಂದೀರೊ ಭಿಕ್ಷೆಕೆ ರಾಗಿ ತಂದೀರೋ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು ||ರಾಗಿ||
ಅನ್ನದಾನವ ಮಾಡುವರಾಗಿ
ಅನ್ನ ಛತ್ರವ ನಿಟ್ಟವರಾಗಿ
ಅನ್ಯ ವಾರ್ತೆಗಳ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ ||ರಾಗಿ||
ಮಾತಾ ಪಿತರ ಸೇವಿತರಾಗಿ
ಪಾತಕ ಕಾರ್ಯವ ಬಿಟ್ಟವರಾಗಿ
ಖ್ಯಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ ||ರಾಗಿ||
ಶ್ರೀರಮಣನ ಸದಾ ಸ್ಮರಿಸುವರಾಗಿ
ಗುರುವಿಗೆ ಬಾಗುವಂತವರಾಗಿ
ಕರೆ ಕರೆ ಸಂಸಾರ ನೀಗುವರಾಗಿ
ಪುರಂದರ ವಿಠಲನ ಸೇವಿತರಾಗಿ ||ರಾಗಿ||
0 Comments