Input license here

ಇತ್ತೀಚಿನ ಪೋಸ್ಟ್‌ಗಳು

ಎಲೆಗಳು ನೂರಾರು

 

ಎಲೆಗಳು ನೂರಾರು ಭಾವದ ಎಳೆಗಳು ನೂರಾರು
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ ಭಾಷೆ ಪಂಥ ಹಲವು
ಅವುಗಳ ಹಿಂದೆ ಮಾತ್ರ ಒಂದೇ ಒಲವು
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ
ನೀಗೋಣ ಭಿನ್ನತೆ ನೀಗೋಣ
ಸಾವಿರ ಹೆಜ್ಜೆ ಒಂದೇ ಗುರಿಗಾಗಿ

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಸೂರ್ಯ ಚಂದ್ರ ಲಾಂದ್ರ ಹಣತೆ
ಅವುಗಳ ಹಿಂದೆ ಮಾತ್ರ ಒಂದೇ ಘನತೆ
ತೆರೆಯೋಣ ಹೃದಯ ತೆರೆಯೋಣ
ನಾವು ನೀವು ಸೇರಿ ಒಂದಾಗಿ
ಮರೆಯೋಣ ಭೇದ ಮರೆಯೋಣ
ನದಿಗಳು ಕೂಡಿದ ಪ್ರೀತಿಯ ಕಡಲಾಗಿ

ಪದಗಳು ನೂರಾರು ಬದುಕಿನ ಹದಗಳು ನೂರಾರು
ಪದಗಳ ಹಿಂದೆ ಒಂದೇ ಉಸಿರು
ಅಕ್ಕರೆಯಿಂದ ಒಟ್ಟಿಗೆ ಬಾಳೋಣ
ಭಾರತ ಮಾತೆಗೆ ನಮ್ಮ ಪ್ರೀತಿ ತೋರೋಣ
ಕಟ್ಟೋಣ ನಾಡನು ಕಟ್ಟೋಣ
ನಾವು ನೀವು ಸೇರಿ ಒಂದಾಗಿ
ಮುಟ್ಟೋಣ ಮಾಡನು ಮುಟ್ಟೋಣ
ತಾರೆಗಳೇ ಈ ನಾಡಿನ ಸೂರಾಗಿ

                                                                -  ಎಚ್. ಎಸ್. ವೆಂಕಟೇಶ್ ಮೂರ್ತಿ

 Watch YouTube video

 

Post a Comment

0 Comments