ಕನಕದಾಸರ ಜೀವನ ಚರಿತ್ರೆ
ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡಭಾಷೆಯ ಪ್ರಸಿದ್ಧ ಕೀರ್ತನಾಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.
ರಾಮಧಾನ್ಯಚರಿತೆ ರಾಮಧಾನ್ಯಚರಿತ್ರೆಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯ ವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರ ರಸದ ಮಾತುಗಳಿಗೇನೂ ಕೊರತೆಯಿಲ್ಲ.
ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು...ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪವಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.
ಹರಿಭಕ್ತಿಸಾರ ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.
ಕೀರ್ತನೆಗಳು ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡರಿಪು ಗಂಡ ಉದ್ಧಂಡ ನರಸಿಂಹನ ಎಂದು ಸಂತೋಷಪಟ್ಟಿದ್ದಾರೆ.ಎಲ್ಲಿ ನೋಡಿದರಲ್ಲಿ ರಾಮ ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ ,ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಎಂಬ ಧನ್ಯತಾಭಾವ.ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ,ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ ಎಂದುಕೊಳ್ಳುತ್ತಾರೆ.
ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.
ನಾವು ಕುರುಬರು ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ ನರಕುರಿ ಹಿಂಡುಗಳ ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸ ಸಂಪರ್ಕದ ನಂತರ ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ಜಂಕಿಸಿ ಕೇಳುವ ಹಾಗಾದರು. ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರ, ಕನಕ, ಜಗನ್ನಾಥ ವೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟುಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.
ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . . .ತೀರ್ಥವನು ಪಿಡಿದವರು ತಿರುನಾಮಧಾರಿಗಳೇಜನ್ಮ ಸಾರ್ಥಕವಿರದವರು ಭಾಗವತರಹುದೇ . . .ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . . .ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.
ಕನಕನ ಕಿಂಡಿ ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ. ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತ ಶಕ ೧೨೩೮ (ಶಕವರ್ಷ ೧೧೬೦ ಹೇವಿಲಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖ ಮಾಡಿ ಪ್ರತಿಷ್ಠಾಪಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ, ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ, ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.
ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ. ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ಧೂಳೀ ದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತೇ ಹೊರತು ಸಿನಿಮೀಯವಾಗಿ ಅಲ್ಲ. ಕನಕದಾಸರು ಪುಣ್ಯ ಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ವದ ಸಾಕ್ಷಿ. ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ.
ಕನಕದಾಸರ ಒಂದು ಕೀರ್ತನೆ
ಕನಕದಾಸರ ಕಾವ್ಯದ ಸರಾಗತೆಗೆ ಒಂದು ಉದಾಹರಣೆ:
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊನೀ ದೇಹದೊಳಗೊ, ನಿನ್ನೊಳು ದೇಹವೂಬಯಲು ಆಲಯದೊಳಗೊ, ಆಲಯವು ಬಯಲೊಳೊಗೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆಕುಸುಮದೊಳು ಗಂಧವೂ, ಗಂಧದೊಳು ಕುಸುಮವೂಕುಸುಮ ಗಂಧಗಳೆರಡು ಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿ ಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
0 Comments