ಕಾಡು ಕುದುರೀ ಓಡಿ ಬಂದಿತ್ತ ॥
ಊರಿನಾಚೆ ದೂರದಾರಿ ಸುರುವಾಗ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ ॥
ಮೈಯ್ಯ ಬೆಂಕಿ ಮಿರುಗತಿತ್ತ ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ ಹೌಹಾರಿತ್ತ ಹರಿದಾಡಿತ್ತ ಹೈಹೈ ಅಂತ ಹಾರಿಬಂದಿತ್ತ ॥
ಕಣ್ಣಿನಾಗ ಸಣ್ಣ ಖಡ್ಗ ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಡಬಿಲ್ಲಿನಿಂದ ಬಿಟ್ಟ ಬಾಣದ್ಹಾಂಗ ಚಿಮ್ಮಿ ಹದ್ದ ಮೀರಿ ಹಾರಿ ಬಂದಿತ್ತ ॥
ನೆಲ ಒದ್ದು ಗುದ್ದ ತೋಡಿ ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು ಏಳಕೊಳ್ಳ ತಿಳ್ಳೆಳಾಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತ ॥
-ಚಂದ್ರಶೇಖರ ಕಂಬಾರ
0 Comments