ಕರೆದಾಗ ಬರುವುದೇತರ ಸೊಗಸು ನನ್ನವಳೆ
ಕರೆಸಿಕೊಳ್ಳದೆ ಬಾರ ನನ್ನ ಬಳಿಗೆ
ಬೀಸಣಿಗೆ ಇಲ್ಲದೆಯೆ ಬೇಸಗೆಯ ಕಳೆದೇನು
ನನ್ನೊಡನೆ ನೀನಿರುವ ತನಕ ಚೆಲುವೆ
ನನಗೆ ತಿಳಿಯದು ನೋಡು ನಿನ್ನ ಒಲವಿನ ಜಾಡು
ಮುಡಿದ ಹೂ ಎಸೆದು ಬಿಡು ನನ್ನ ಮೇಲೆ
ಪದ್ಯವನು ಬದಿಗಿಟ್ಟೆ ನಾನು ನೀನೆ ಕವಿತೆ
ನಿನ್ನಾಚೆಗೂ ನೀನೆ ನನ್ನ ನಲಿವೇ
ನಿನ್ನ ಕೆಳದುಟಿಯಲ್ಲಿ ಇರುವ ಕಪ್ಪನೆ ಕಲೆಯ
ನನ್ನ ಸಾವಿರ ಮುತ್ತು ತೊಡೆಯಲಿಲ್ಲ
ನಿನ್ನ ಪಾಲಿಗೆ ನಾನು ತಂತಿ ಇಲ್ಲದ ವೀಣೆ
ವೀಣೆ ಬಂದರು ನೀನು ಮಿಡಿಯಲಿಲ್ಲ
ಸಿರಿಮೌನದಲಿ ನಾನು ಒಲವ ಹುಡುಕಲು ನಡೆದೆ
ಉಸಿರ ಕಟ್ಟೋಡಿದೆನು ಹೊಳೆಯವರೆಗೆ
ನಿನ್ನ ಹಿಡಿದಾಗ ಮೈ ತುಂಬ ಏರಿತು ಕಾವು
ಕವಿತೆಯಾಯಿತು ಪದ್ಯ ಕಟ್ಟ ಕಡೆಗೆ
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments