Input license here

ಇತ್ತೀಚಿನ ಪೋಸ್ಟ್‌ಗಳು

ಹೂವ ಚೆಲ್ಲಿದ ಹಾದಿಯಲ್ಲಿ ನಾನಿದ್ದೇನೆ

 ಹೂವ ಚೆಲ್ಲಿದ ಹಾದಿಯಲ್ಲಿ ನಾನಿದ್ದೇನೆ
ಸಂಪಿಗೆಯ ನರುಗಂಪು ಅರಳುತಿಹುದು ;
ಹಳೆಯ ನೆನೆಪುಗಳಲ್ಲಿ ಚೆಲುವ ಕಂಡಿದ್ದೇನೆ
ಹೂವ ಮೇಗಣ ಗಾಳಿ ಬೀಸುತಿಹುದು.

ವರುಷ ಕಳೆದರೆ ವರುಷ ಹೊಸ ದನಿಯ ಪುಟಗಳಲಿ
ನಲಿವು ತೆರೆಯುತ್ತಿಹುದು ಪ್ರೀತಿಯಿಂದ ;
ಮಾಘ ಮಾಸದ ಸಂಜೆ ನೀನು ಸಿಕ್ಕಿದ್ದೀಯೆ
ಹೊಸತು ಏನಾದರೂ ಬೇಕೆನ್ನುವೆ.

ನನ್ನ ಕನ್ನಡಿ ಹಳತು, ಮುಖ ಹೊಸತು, ಓ ಗೆಳೆಯ
ನೀನು ಬಂದಿದ್ದೀಗ ಸರಿಹೋಯಿತು ;
ಚಿತ್ರ ಮರುಕೊಳಿಸುವುದು, ಚೆಲುವು ಸರಿವುದು ಬಲಕೆ
ಗೆಲವು ಬಾವುಟವೆತ್ತಿ ಕಾಯುವುದು.

ಹೊಸ ಕಾಣ್ಕೆ, ಹೊಸ ಕಣ್ಣು ಕೈ ಬೀಸಿ ಕರೆಯುತಿದೆ
ಸಂಗೀತ ಹರಿಯುತಿದೆ ಕಣೆವೆಯಲ್ಲಿ;
ಕೆಲವು ಹಾಡುಗಳಂತು ಕಣ್ಣೀರ ಸುರಿಸುತ್ತ
ಮುಂದೆ ನಡೆವುವು ಮುತ್ತುಸಂಜೆಯಲ್ಲಿ.

ಬಾ ಗೆಳೆಯ, ಗೋಧೂಳಿಯಲ್ಲಿ ಚಾಟಿಯನೆಸೆದು
ನೋವು ನಲಿವುಗಳನ್ನು ನೆನೆಯುತ್ತ ಬಾ;
ಹಳತು ಹೊಸತಾಗುವುದು ನಮ್ಮೂರ ಬೀದಿಯಲಿ,
ನಕ್ಷತ್ರಗಳ ಕೆಳಗೆ ದಾರಿ ಸುಗಮ.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments