ಎಲ್ಲಿರುವೆ ಕಾಣಿಸದೆ
ಕರೆವ ಕೊರಳೆ
ಎಲ್ಲಿರುವೆ ಹೇಳು ನೀ
ನಿಜವೆ ನೆರಳೆ
ಮಂಜು ನೇಯುವ
ಸಂಜೆಗನಸಿನಂತೆ
ಸಂಜೆ ಬಿಸಿಲಿನ
ಮಳೆಯ ಮನಸಿನಂತೆ
ನಿಂತ ಎದೆಗೊಳದಲ್ಲಿ
ಚಿಂತೆ ಬರೆಯಲು
ಯಾರೊ ಎಸೆದ
ಕೋಗಿಲೆಯ ದನಿ ಹರಳಿನಂತೆ
ನಿನಗೆಂದೆ ನೆಲ
ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ
ತಿರುಗಿ ನಲಿದೆ
ಮೂಡಿ ಬಂದೆನೊ
ಇಗೊ ಪರಿವೆ ಇರದೆ
ಓಡಿ ಬರುವಂತೆ
ನದಿ ಕಡಲ ಕರೆಗೆ
- ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ
0 Comments