Input license here

ಇತ್ತೀಚಿನ ಪೋಸ್ಟ್‌ಗಳು

ಅಮೃತವಾಹಿನಿಯೊಂದು ಹರಿಯುತಿದೆ ಮಾನವನ

ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ;
ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು;
ಸುತಮುತ್ತಲು ಮರಳು, ಮೇಲೆ ಪಾಚಿ
ಮುತ್ತಿಕೊಂಡರು ಲುಪ್ತವಾಗದೀ ಅಮೃತಧುನಿ
ಕಿರಿದಾಗಿ, ಬರಿದಾಗಿ, ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳುಸುತಿದೆ ಸೆಲೆಯು,
ಏನನೋ ಕಾಯುತಿದೆ ಗುಪ್ತವಾಗಿ !

ಇಂದಲ್ಲ ನಾಳೆ ಹೊಸ ಬಾನು ಬಗೆತೆರೆದೀತು
ಕರಗೀತು ಮುಗಿಲ ಬಳಗ;
ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ,
ತೊಳೆದೀತು ಒಳಗು-ಹೊರಗ.

ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
ಸೇರದಿರೆ ಇಲ್ಲ ನಿಸ್ತಾರ;
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
ಈ ಬಾಳಿಗಾ ಮಹಾಪೂರ !

-ಎಮ್. ಗೋಪಾಲಕೃಷ್ಣ ಅಡಿಗ.

Post a Comment

0 Comments