ಸುಬ್ಬಾಭಟ್ಟರ ಮಗಳೇ ಇದೆಲ್ಲ ನಂದೆ ತಗೊಳ್ಳೇ
ನೀಲಿ ನೈಲೆಕ್ಸಿನ ಮೇಘವಿನ್ಯಾಸದ ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆಯೆಲ್ಲಿ? ||ಸುಬ್ಬಾ||
ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿ ಜಿಗಿ ಒಡವೆ ದುಕಾನು
ಆರಿಸಿಕೋ ಬೇಕೇನು?
ಚಿಕ್ಕೆ ಮೂಗುತಿ ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ! ||ಸುಬ್ಬಾ||
ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಎಂದೂ ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಹೌದು!
ಪಾತರಗಿತ್ತಿಯ ಪಕ್ಕವನೇರಿ
ಧೂಪಡ ಕಾನಿಗೆ ಹಾರಿ
ಪ್ರಾಯದ ಮಧು ಹೀರಿ
ಚುಳು ಚುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳುಮುಳುಗಿ
ನಿನ್ನ ಹೊಸತನದಲಿ ಬೆಳಗಿ ||ಸುಬ್ಬಾ||
- ಬಿ.ಆರ್.ಲಕ್ಷ್ಮಣ್ ರಾವ್
0 Comments