ಹೇಳಿ ಹೋಗು ಕಾರಣ ಹೋಗುವ ಮೊದಲು ನನ್ನ ಬಾಳಿನಿಂದ ದೂರಾಗುವ ಮೊದಲು ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ ಇಂದೇಕೆ ಹೀಗೆ ಬೆಳಕನ್ನು ತೊರೆದು ನೀ ಸರಿದೆ ನೆರಳಿಗೆ ? ಇಂದ್ಯಾವ ಬಂಧ ತೊಡರಿದೆ ನಿನ್ನ ಕಾಲಿಗೆ ? ಸುಡುಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ ? ಸವಿಭಾವಗಳಿಗೆ ನೀ ನಾದ ನೀಡಿ ಜೊತೆಗೂಡಿ ಹಾಡಿದೆ ಇಂದ್ಯಾವ ಅಳಲು ? ಸೆರೆಯುಬ್ಬಿ ಕೊರಳು ನೀ ಮೌನ ತಾಳಿದೆ ನೀ ನೆಟ್ಟು ಬೆಳೆಸಿದ ಈ ಮರ ಫಲ ತೊಟ್ಟ ವೇಳೆಗೆ ಹೀಗೇಕೆ ಮುರಿದು ಉರುಳಿದೆ ಯಾವ ದಾಳಿಗೆ ? - ಬಿ.ಆರ್. ಲಕ್ಷ್ಮಣರಾವ್
0 Comments