ನಿನ್ನ ಕಿರುನಗೆಯೊಂದೆ ಸಾಲದೇ, ಓ ನಲ್ಲ,
ಈ ಬಾಳು ಬೆಳಕಾಗಲು ?
ನಿನ್ನ ಬಿರುನುಡಿಯೊಂದೆ ಸಾಲದೇ ಕ್ಷಣದಲ್ಲೆ
ಆವರಿಸಲು ಕತ್ತಲು ?
ನಿನ್ನ ನಿಟ್ಟುಸಿರೊಂದು ಸಾಲದೇ ಬಾಳಲ್ಲಿ
ಚಂಡಮಾರುತವೇಳಲು ?
ನಿನ್ನ ಕಣ್ಣಿನ ಒಂದು ಕಿರು ಸನ್ನೆ ಸಾಲದೇ
ಜಗವನ್ನೆ ನಾ ಆಳಲು ?
ಹುಬ್ಬುಗಳ ನೀನು ಗಂಟಿಕ್ಕಿದರೆ ಸಾಲದೇ
ಕಾರ್ಮೋಡಗಳು ಕೂಡಲು ?
ಬರಸೆಳೆದು ನೀನು ಬಿಗಿದಪ್ಪಿದರೆ ಸಾಲದೇ
ಧೋ ಎಂದು ಮಳೆ ಸುರಿಯಲು ?
ನಿನ್ನ ಕಂಗಳ ಒಂದು ಉರಿ ನೋಟ ಸಾಲದೇ
ಧಗಿಧಗಿಸಲು ಜೀವನ ?
ನಿನ್ನ ತುಟಿಗಳ ಸವಿಮುತ್ತು ಸಾಲದೇ
ಹೊಮ್ಮಲು ಹೊಸ ಚೇತನ ?
- ಬಿ.ಆರ್.ಲಕ್ಷ್ಮಣ್ ರಾವ್
0 Comments