Input license here

ಇತ್ತೀಚಿನ ಪೋಸ್ಟ್‌ಗಳು

ಸೊಕ್ಕು ತಲೆಯ ರೆಕ್ಕೆ ಬಲಿಯ

ಸೊಕ್ಕು ತಲೆಯ ರೆಕ್ಕೆ ಬಲಿಯ
ದೂದಿ ನಿಂತ ಕೀಟ
ನಾವು ನರರು; ನೂರು ಕನಸು
ಕುಣಿವ ದಾರುಪೀಠ !

ಇರುವ ಮೂರು ದಿನಕೆ ನೂರು
ಕಲಹ, ಕರುಬು, ಕಾಟ;
ನೂರು ಹಸಿವು, ನೂರು ದಾಹ,
ವಿಷಯದೆಂಜಲೆಲೆಯೂಟ.

ಸ್ವಾರ್ಥದ ಸೆರೆಮನೆಯಲ್ಲಿಯೆ
ಒಲಿವ ನಲಿವ ಬೇಟ;
ಎದೆಗು ಎದೆಗು ನಡುವೆ ಕಡಲು !
ಎಂಥ ಹೃದಯ ಕೂಟ !

ಒಂದೆ ಬೆದೆಗೆ ನೂರು ತರದ
ಕಾಳ ಬೆಳೆವ ಹೂಟ;
ಬಂಜೆ ಹೂವು, ಬರಿಯ ನೋವು
ಬೆಳೆಯುವಂಥ ತೋಟ.

ಎದೆಯು ಬರಿದು, ಬಾಳು ಬರಿದು,
ಬರಿದು ನಮ್ಮ ನೋಟ;
ಅಳುವು ನಗುವು, ಸರಸ ವಿರಸ
ಕಣ್ಣ ಮುಚ್ಚಲಾಟ.
ಸಾವಿನೆಡೆಗೆ ಅಂತು ಇಂತು
ನಮ್ಮ ಬಾಳಿನೋಟ

-ಎಮ್. ಗೋಪಾಲಕೃಷ್ಣ ಅಡಿಗ.

Post a Comment

0 Comments