ಶತಮಾನದಿಂದ ಹತಭಾಗ್ಯರಾಗಿ
ಕೆಳಗುರುಳಿ ಬಿದ್ದ ಜನವೆ
ಕುರುಡು ಕತ್ತಲೆಗೆ ಕಣ್ಣ ಬೆಳಕುಗಳ
ತೆತ್ತು ಮಲಗಿದವರೆ
ಹೊಲವಿದ್ದು ಕೂಡ ಉಳಲಾಗಲಿಲ್ಲ
ಬಲವಿದ್ದು ಬಾಗಿದವರೆ
ಬಾಯಿದ್ದು ಕೂಡ ಮಾತಾಡದಂತೆ
ಕಣ್ಣಲ್ಲೆ ಕೊರಗಿದವರೆ
ತೆನೆ ತುಂಬಿ ನಿಂತ ಹೊಲ ಗದ್ದೆ ಬದಿಗೆ
ಹಸಿವಿಂದ ಸತ್ತ ಜನವೆ
ಮಹಲು ಕಾರುಗಳಾ ಕೆಂಪು ಟೇಪುಗಳ
ಉರುಳಲ್ಲಿ ನರಳಿದವರೆ
ಸಾಧು ಸಂತ ಮಠ ದೇಗುಲ ವರ್ಗದ
ಅಜಗರ ಪೀಡಿತ ಜನವೆ
ಮುಗ್ಧ ಶ್ರದ್ಧೆಯಲ್ಲಿ ಮಂಡೆಯನ್ನೊಪ್ಪಿಸಿ
ಬತ್ತಲಾದ ಜನವೆ
-ಜಿ. ಎಸ್. ಶಿವರುದ್ರಪ್ಪ
0 Comments