Input license here

ಇತ್ತೀಚಿನ ಪೋಸ್ಟ್‌ಗಳು

ಇದಾವ ರಾಗ ಮತ್ತೆ

 ಇದಾವ ರಾಗ ಮತ್ತೆ
ಇದಾವ ರಾಗ
ಎದೆಯಾಳದಿಂದೆದ್ದು
ನಭ ನೀಲಿಗೇರುತಿದೆ

ಯುಗ ಯುಗಾಂತರದೆದೆಯ
ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ
ಕೊಳಗಳನ್ನು ಕದಡುತಿದೆ
ಮುರಿದ ಶತ ಬಯಕೆಗಳ
ಮೇಲೆತ್ತಿ ತೂರುತಿದೆ
ಬಗೆಯ ಬಾನ್ ಬಯಲಿನಲಿ
ಮೋಡಗಳ ಕವಿಸುತಿದೆ

ಹಚ್ಚ ಹಸುರೆಲೆಯಿಂದ
ಬಿಸಿ ಉಸಿರ ಹೊಮ್ಮಿಸಿದೆ
ಜೀವನದ ತಂತಿಗಳ
ಝುಮ್ಮೆಂದು ನಡುಗಿಸಿದೆ
ಸುತ್ತ ಜ್ವಾಲಾಮುಖಿಯ
ತಟ್ಟಿ ಎಚ್ಚರಿಸುತ್ತಿದೆ
ಹಣೆಯ ಬರಹವನ್ನೊರೆಸಿ
ಬೇರೊಂದು ಬರೆಯುತಿದೆ

-ಜಿ. ಎಸ್. ಶಿವರುದ್ರಪ್ಪ

Post a Comment

0 Comments