ಕುದುರೇನ ತಂದೀನಿ ಜೀನಾವ ಬಿಗಿದಿನಿ
ಬರಬೇಕು ತಂಗಿ ಮದುವೇಗೆ |
ಅಂಗ್ಳ ಗುಡಿಸೋರಿಲ್ಲ ಗಂಗ್ಳ ತೊಳೆಯೋರಿಲ್ಲ
ಹೆಂಗ ಬರಲಣ್ಣ ಮದುವೇಗೆ?
ಅಂಗ್ಳಾಕೆ ಆಳಿಡುವೆ ಗಂಗ್ಳಾಕೆ ತೊತ್ತಿಡುವೆ
ಬರಬೇಕು ತಂಗಿ ಮದುವೇಗೆ ||ಕು||
ಮಳೆಯಾರ ಬಂದೀತು ಹೊಳೆಯಾರ ತುಂಬೀತು
ಹೆಂಗ ಬರಲಣ್ಣ ಮದುವೇಗೆ?
ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ
ಚೋಕೇಲಿ ನಿನ್ನ ಕರೆದೊಯ್ವೆ
ಬರಬೇಕು ತಂಗಿ ಮದುವೇಗೆ ||ಕು||
ಅಪ್ಪಯಿದ್ದರೆ ಎನ್ನ ಸುಮ್ಮಾನೆ ಕಳುಹೋರೆ
ಅಮ್ಮಾ ಇಲ್ಲಾದ ಮನೆಯಲ್ಲಿ
ಬಂದಾರೆ ಬಂದೇನು ಅಂಗ್ಳದಾಗೆ ನಿಂದೇನು
ಕಣ್ಣಾಗೆ ಧಾರೆ ಎರೆದೇನು ||ಕು||
0 Comments