ಹೆಣ್ಣಿನ ಜನುಮಾಕೆ ಅಣ್ಣತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ
ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ
ಹೊನ್ನು ಕಟ್ಟುವರು ಉಡಿಯೊಳಗೆ ||
ಎನಗೆ ಯಾರಿಲ್ಲಂತ ಮನದಾಗ ಮರುಗಿದರು
ಪರನಾಡಲೊಬ್ಬ ಪ್ರತಿಸೂರ್ಯ | ನನ್ನಣ್ಣ
ಬಿದಿಗೆ ಚಂದ್ರಾಮ ಉದಿಯಾದ ||ಹೆ||
ಮನೆಯ ಹಿಂದಲ ಮಾವು ನೆನೆದಾರೆ ಘಮ್ಮೆಂದು
ನೆನೆದಂಗೆ ಬಂದ ನನ ಅಣ್ಣ | ಬಾಳೆಯ
ಗೊನೆಯ್ಹಾಂಗೆ ತೋಳ ತಿರುವೂತ ||ಹೆ||
ಸರದಾರ ಬರುವಾಗ ಸುರಿದಾವು ಮಲ್ಲಿಗೆ
ದೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ
ಗೊನೆ ಬಾಗಿ ಹಾಲ ಸುರಿದಾವೊ ||ಹೆ||
ಅಣ್ಣ ಬರುತಾನಂತ ಅಂಗಳಕೆ ಕೈಕೊಟ್ಟು
ರನ್ನ ಬಚ್ಚಲಿಗೆ ಮಣಿ ಹಾಕಿ | ಕೇಳೇನು
ತಣ್ಣಗಿಹರಣ್ಣ ತವರವರು ||ಹೆ||
ಕೃಪೆ:
ಸುಪ್ರಸಿದ್ದ ಜನಪದ ಗೀತೆಗಳ ಪುಸ್ತಕ
0 Comments