Input license here

ಇತ್ತೀಚಿನ ಪೋಸ್ಟ್‌ಗಳು

ನನ್ನ ಕಾಂಪೌಂಡಲ್ಲಿ ನಾನೆ ಬೆಳಸಿದ ತೆಂಗು

 ನನ್ನ ಕಾಂಪೌಂಡಲ್ಲಿ ನಾನೆ ಬೆಳಸಿದ ತೆಂಗು
ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ,
ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ
ರಸ್ತೆಗೂ ಅದು ನೆರಳ ಚೆಲ್ಲಿದ ಅರಿವಾದದ್ದು,
ಆ ನೆರಳಾಲ್ಲಿ ನಿಂತ ಯಾರದೋ ಕಾರು ಕಂಡಾಗಲೇ.

ಅರೆ, ಎಂದು ಒಂದು ಕ್ಷಣ ಆಶ್ಚರ್ಯಪಟ್ಟೆ.
ಆಲೋಚಿಸಿದೆ:
ನೆರಳು ನನ್ನ ಮರದ್ದು, ನಿಲ್ಲಿಸಬೇಡಯ್ಯ ಕಾರು-
ಅಂದರೆ ತಪ್ಪೆ?
ಅದರ ನೆರಳಲ್ಲಿ ನಿಂತದ್ದರಿಂದ ಆ ಕಾರು
ನನ್ನದೆಂದರೆ ತಪ್ಪೆ?

ದಬಾಯಿಸಿದರೆಅವ ಹೀಗೆ: ಬೆಪ್ಪೆ,
ತೆಂಗು ನಿನ್ನದಿರಬಹುದು, ನೆರಳು ನಿನ್ನದ?
ದಿನಬೆಳಗಾದರೆ ಗರಿಗಳಲ್ಲಿ ಅರಳುವ ಹಕ್ಕಿ ನಿನ್ನದ?
ಅದರ ಕಿಚಪಿಚ, ಅಲೆಯುವ ಹವೆ, ಹೊಳೆಯುವ ಕಿರಣ,
ತೂಗುವ ಚಂದ್ರ- ನಿನ್ನದ?

ಇದು ಸಾರ್ವಜನಿಕ ರಸ್ತೆ- ನಿಲ್ಲಿಸಲು,
ಅಲ್ಲಿ ಚೆಲ್ಲಿದ ನೆರಳೂ ನನ್ನದೆನ್ನಲು, ಹಕ್ಕುಂಟು
ಅಲ್ಲದೆ, ನೆರಳ ನೆಪದಿಂದ ವಾಹನ ನಿಲ್ಲುತ್ತೆ,
ಹಾಗಾಗಿ ಸಂಚಾರಕ್ಕೆ ಅಡಚಣೆ, ಕತ್ತರಿಸು
ಮರವನೆಂದರೆ ಎಲ್ಲಿದೆ ನನ್ನಲ್ಲಿ ಜವಾಬು?

ಕ್ಷಣ, ದಿಗಿಲಾಗಿ,
ಕಾರಲ್ಲಿ ಯಾರೂ ಇಲ್ಲದ್ದು ಖುಷಿಯಾಗಿ,
ನೆರಳ ನೋಡದೆ
ಬರೀ ಕಾರಿನಂದವ ಮೆಚ್ಚುತ್ತ ಸರಸರ ಒಳಗೆ ನಡೆದೆ.

-ಕೆ.ಎಸ್.ನಿಸಾರ್ ಅಹಮದ್

Post a Comment

0 Comments