ನಗೆಯ ಪ್ರೀತಿಯೆಂದು ನಂಬಿ
ಅಳುವ ಮರೆಸುವವಳೆ,
ಧರೆಯನೊಳಗೆ ಸ್ವಾನುಭವಿಸಿ
ಮೇಲೆ ನಗುವ ತರಳೆ--
ಬೆಂಕಿಗಿಟ್ಟ ಕೆಂಗುಲಾಬಿ
ನಿನ್ನ ತುಟಿಯ ಪಾಡು;
ಒತ್ತಾಯದ ನಗೆಯನೆಳೆಯ--
ಲಲ್ಲಿ ನಗೆಯ ಈಡು.
ನಂಬಬಹುದೆ ಮರಳು ಭೂಮಿ-
ಯಲ್ಲಿ ಚಿಗಿಯೆ ತೋಟ?
ನಂಬಲಾರೆ, ನಗೆಯ ಮರೆಸು!
ವಿಕಟ ಅದರ ನೋಟ.
ಕಣ್ಣತುಂಬ ಹನಿಯ ಹೆಜ್ಜೆ--
ಮರೆಸು ತಂದೆ ಹಾಸ;
ಇನ್ನು ಅಧಿಕವಾಯ್ತು ಶೋಕ,
ಮರೆಯ ಕಡಲು ಭಾಸ.
-ಕೆ ಎಸ್ ನಿಸಾರ್ ಅಹಮದ್.
0 Comments