ಕರ್ನಾಟಕದ ಇತಿಹಾಸ

1973ರಕ್ಕೂ ಮುಂಚೆ ಮೈಸೂರು ಮಹಾಸಂಸ್ಥಾನವೆಂದೇ ಪ್ರಸಿದ್ದಿ ಹೊಂದಿದ್ದ , ನಮ್ಮ ಗಂಧದ ಗುಡಿ , ಅಂದದ ಬೀಡು ಕರ್ನಾಟಕದ ಇತಿಹಾಸದ ಬಗ್ಗೆ ನಿಮಗೆಷ್ಟು ತಿಳಿದಿದೆ ? ಕರ್ನಾಟಕ ಎಂಬ ರಾಜ್ಯ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾದರು ಯಾರು? ನಮ್ಮ ಕನ್ನಡನಾಡಿನ ಕೀರ್ತಿಪತಾಕೆಯನ್ನು ಎತ್ತಿಹಿಡಿದ ಅಂದಿನ ಮಹಾನುಭಾವರು ಯಾರು ?
ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆಯಂತೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕ್ರತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು , ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ.
ಕ್ರಿ.ಪೂ.೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಡುವ ಮೊದಲು ನಂದ ಸಾಮ್ರಾಜ್ಯದ ಭಾಗವಾಗಿದ್ದಿತ್ತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಕದಂಬ ಸಾಮ್ರಾಜ್ಯವು ಮಯೂರಶರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗು ಅದರ ರಾಜಧಾನಿ ಬನವಾಸಿಯಾಗಿತ್ತು. ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ ಸ್ಥಾಪಿಸಿದರು.
ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗು ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟೀಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗು ಬ್ರಿಟೀಷ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು.
ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್ " ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು.
0 Comments