ಗಂಗರು
ಗಂಗರು ಸುಮಾರು ೪ನೇ ಶತಮಾನದಿಂದ ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ. ಗಂಗರ ಮನೆತನದ ಮೊದಲ ಅರಸನಾದ ಕೊಂಗಣಿವರ್ಮ ಮಾಧವನು ಕೋಲಾರವನ್ನು ತನ್ನ ಮೊದಲ ರಾಜಧಾನಿಯಾಗಿ ಮಾಡಿ ೨೦ ವರುಷ ರಾಜ್ಯವನ್ನು ಆಳಿದನು. ಅವರ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಗಂಗಾವತಿ ಎಂದು ಕರೆಯಲಾಗಿದ್ದು ಈಗಿನ ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಹಾಗು ಬೆಂಗಳೂರನ್ನು ಆವರಿಸಿತ್ತು. ಗಂಗರು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕೆಲ ಪ್ರದೇಶಗಳಿಗೆ ರಾಜ್ಯವನ್ನು ವಿಸ್ತರಿಸಿದ್ದರು.
ಹರಿವರ್ಮನು (ಕ್ರಿ.ಶ 390) ತಲಕಾಡನ್ನು ರಾಜಧಾನಿಯಾಗಿ ಮಾಡಿದನು. ಗಂಗರ ಪ್ರಸಿದ್ದ ಅರಸ ದುರ್ವಿನಿತ (555-605) ಸಂಗೀತ, ನೃತ್ಯ, ಆಯುರ್ವೇದ ಮತ್ತು ಆನೆಗಳ ಪಳಗಿಸುವಿಕೆಯಲ್ಲಿ ಪಾರಂಗತನಾಗಿದ್ದನು. ಬುದ್ಧಿವಂತಿಕೆ ಮತ್ತು ಸಮಾನತೆಗೆ ಹೆಸರುವಾಸಿಯಾದ ಯುಧಿಷ್ಠಿರ ಮತ್ತು ಮನು ಚಕ್ರವರ್ತಿಗಳಿಗೆ ಇವರನ್ನು ಹೋಲಿಸಿ ಕಾವ್ಯಗಳನ್ನು ರಚಿಸಿದ್ದಾರೆ. ಇವರಿಗೆ ಅಹೀತ ಅನೀತ, ಧರ್ಮ ಮಹಾರಾಜಾಧಿರಾಜ, ಅವನೀತಸಾರ ಪ್ರಜಾಲಯ, ಕಮಲೋಧರ ಎಂಬ ಬಿರುದುಗಳಿದ್ದವು. ತಲಕಾಡಿನ ಗಂಗರ ಆಡಳಿತವು ಅರ್ಥಶಾಸ್ತ್ರದ ತತ್ವಗಳಿಂದ ಪ್ರಭಾವಿತವಾಗಿದ್ದು ರಾಜ್ಯವನ್ನು ರಾಷ್ಟ್ರ, ವಿಷಯ (1000 ಹಳ್ಳಿಗಳಿಂದ ಕೂಡಿದ್ದು) ಮತ್ತು ದೇಶ ವಾಗಿ ವಿಂಗಡಿಸಲಾಗಿತ್ತು. ೮ ನೆ ಶತಮಾನದಲ್ಲಿ ಸಂಸ್ಕೃತದ “ವಿಷಯ” ಪದವನ್ನು ಕನ್ನಡದ “ನಾಡು” ಪದಕ್ಕೆ ಬದಲಿಸಲಾಯಿತು.ಶಾಸನಗಳು ಪ್ರಮುಖ ಆಡಳಿತ ಅಂಕಿತಗಳಾದ ಸರ್ವಾಧಿಕಾರಿ, ಶ್ರೀಭಂಡಾರಿ, ಸಂಧಿವಿರ್ಗ್ರಹಿ, ಮಹಾಪ್ರಧಾನ ಮತ್ತು ದಂಡನಾಯಕ ಬಗೆಗೆ ಬೆಳಕು ಚೆಲ್ಲುತ್ತವೆ.
ತಲಕಾಡಿನ ಗಂಗರು ಅವರ ಕಾಲದ ಎಲ್ಲ ಪ್ರಮುಖ ಧರ್ಮಗಳಿಗೆ (ಜೈನ ಧರ್ಮ, ಹಿಂದೂ ಪಂಥಗಳಾದ ಶೈವ, ವೈದಿಕ ಬ್ರಾಹ್ಮಣ, ಶೈವ) ಪ್ರೋತ್ಸಾಹ ನೀಡಿದರು. ಜೈನ ಧರ್ಮವು ೮ ನೆ ಶತಮಾನದಲ್ಲಿ ರಾಜ ಶಿವಮಾರ-೧ ನ ಆಳ್ವಿಕೆಯಲ್ಲಿ ಬಹಳ ಪ್ರಸಿದ್ದಿ ಗಳಿಸಿದ್ದು ರಾಜನು ಅಸಂಖ್ಯಾತ ಜೈನ ಬಸದಿಗಳನ್ನು ಕಟ್ಟಿಸಿರುವುದಕ್ಕೆ ಸಾಕ್ಷಿಯಾಗಿದೆ. ಮಹಾರಾಜ ೨ನೇ ಬುಟುಗ ಮತ್ತು ಚಾವುಂಡರಾಯರು ಕಟ್ಟಾ ಜೈನರು ಎಂದೆನ್ನಲು ಅವರು ಕಟ್ಟಿಸಿದ ಗೊಮ್ಮಟೇಶ್ವರ ಏಕಶಿಲೆಯೇ ಸಾಕ್ಷಿ. ಈ ಸಾಮ್ರಾಜ್ಯದ ಆರಂಭಿಕ ಬರಹಗಾರ ರಾಜ ದುರ್ವಿನಿತ ಎಂದು ಕವಿರಾಜಮಾರ್ಗ (ಕ್ರಿ.ಶ 850) ಹೇಳುತ್ತದೆ. ಚಾವುಂಡರಾಯರು ಕನ್ನಡದ ಮಹಾ ಕವಿ “ರನ್ನ” ನನ್ನು ಆರಂಭಿಕ ಸಾಹಿತ್ಯದ ದಿನಗಳಲ್ಲಿ ಪೋಷಿಸಿದರು. ಗಜಾಷ್ಟಕ (ಆನೆಗಳು ಕುರಿತು ನೂರು ಪದ್ಯಗಳು), ಕನ್ನಡದಲ್ಲಿ ಆನೆ ನಿರ್ವಹಣೆಗಳ ಕುರಿತಾದ ಅಪರೂಪದ ಒಂದು ಪುಸ್ತಕವಾಗಿದ್ದು (ರಾಜ ಶಿವಮಾರ -೨ ಕ್ರಿ.ಶ 800 ಬರೆದ ಪುಸ್ತಕ ) ಈಗ ಕಳೆದುಹೋಗಿದೆ ಎಂದು ನಂಬಲಾಗಿದೆ.
0 Comments