ನಿಮ್ಮೂರ ದಾರಿಯಲಿ ನಾ ನಿನ್ನ ಕಂಡಾಗ
ನಿಮ್ಮೂರ ದಾರಿಯಲಿ ನಾ ನಿನ್ನ ಕಂಡಾಗ
ಕೆಂಪು ಹೂ ಅರಳಿತ್ತು, ನನ್ನ ನಲ್ಲೆ;
ಪರಿಮಳವ ಹೋತ್ತು ತಂಗಾಳಿ ಬೀಸುತಿತ್ತು
ಆ ದಿನದ ಚೆಲುವನ್ನು ನೀನು ಬಲ್ಲೆ.
ಬೆಳಕು ಹರಿದಿತ್ತು ಬಡವನ ಬಟ್ಟೆ ಹರಿದಂತೆ
ಬೇಲಿಗಳ ಮೇಲೆ ಇಲ್ಲಲ್ಲಿ ಮುಳ್ಳು;
ಮಾಂದಳಿರ ಹಿಂದೆ ಕೋಗಿಲೆ ಹಾಡು ನಡೆದಿತ್ತು
ಚೆಲುವು ತಾನೇ ತಾನು ಇಲ್ಲು ಅಲ್ಲು.
ನೀ ಮನೆಗೆ ಬಂದೆ ಹೂವಾಗಿ,ತಂಬೆಲರಾಗಿ
ಚಂದಿರನ ಹತ್ತಿರದ ತಾರೆಯಾಗಿ;
ಬೆರಗಾದೆ ನಾನು, ಹತ್ತಿರ ಬಂದೆ, ಮುಟ್ಟದೆಯೆ
ನಿನ್ನ ಮಾತಾಡಿಸಿದೆ ಪ್ರೀತಿಯಾಗಿ.
ನಿನ್ನ ನಿಟ್ಟುಸಿರಲ್ಲಿ ಒಲವು ಸುಳಿದುದು ಕಂಡೆ,
ಸಾಲು ದೀಪವ ಕೋಣೆಯಲ್ಲಿ.
-ಕೆ ಎಸ್ ನರಸಿಂಹಸ್ವಾಮಿಯವರು.
0 Comments