Input license here

ಇತ್ತೀಚಿನ ಪೋಸ್ಟ್‌ಗಳು

ಕೆಲವು ಹೂ ರಾತ್ರಿಯಲ್ಲರಳಿ ಕಂಪನು ಬೀರಿ ನೆಲಕೆ ಬೀಳುವುವು

 ಕೆಲವು ಹೂ ರಾತ್ರಿಯಲ್ಲರಳಿ ಕಂಪನು ಬೀರಿ ನೆಲಕೆ ಬೀಳುವುವು;
ಮುಂಬೆಳಗಿನಲ್ಲಿ ಹಕ್ಕಿಯ ಹಾಡು ಪರಿಮಳಿಸಿ ಮುಗಿದು ಬಿಡುವುದು;
ಕೆಲವು ಮಕ್ಕಳು ಉಂಡೊ ಉಣ್ಣದೆಯೊ ಹೋಗುವುವು ತಂತಮ್ಮ ಶಾಲೆಗಳಿಗೆ;
ಬಸಿರಿ ಭಾವಿಗೆ ಬಂದು ಬಿಂದಿಗೆಯ ನೂಕುವಳು ತಳದ ನೀರಿಗೆ;
ಅಂಗಡಿಯ ತೆರೆದು ಧೂಳನು ಹೊಡೆದು ಕೂರುವರು ನಮ್ಮೂರ ವರ್ತಕರು;
ಊರ ದೇಗುಲದಲ್ಲಿ ಕೇಳಿ ಬರುವುದು ಭಜನೆ, ಅಜ್ನಾತ ಸಂಗೀತ;
ಚೈತ್ರಚಿತ್ರೋದಯದ ಗುಂಗಿನಲಿ ನಾನಿದ್ದು ಹೂವಿನಂತಹ ಮಾತು ಬಿಡಿಸುವೆನು ಪ್ರೀತಿಯಲಿ.

ಎಲ್ಲದರ ಆಚೆಗಿನ್ನೊಂದಿಹುದು ಎನ್ನುವರು ಎಲ್ಲತಿಳಿದವರು, ಜೊತೆಗೂ ಬರುವ ಸ್ನೇಹಿತರು;
ನೀರು ತಿಳಿಯುವ ತನಕ ಕಾದು ನಿಲ್ಲುವುದಷ್ಟೆ ನಮ್ಮ ಕರ್ತವ್ಯ;
ಯಾರು ಕೇಳಲಿ ನಾನು ಗುಡಿಯೊಳಗೆ ಇರುವುದೆ ನಮ್ಮ ದೇವರು ಎಂದು?
ಕೈಮರದ ನೆರಳಿನಲಿ ಸರದಿಯಲಿ ಬಂದೆ ಬರುವರು ಎಂದು ನಾನು ನಂಬಿದ್ದೆನೆ;
ಹೆಜ್ಜೆಗಂಟಿದ ನೆರಳ ದಾಟಲಾರದೆ ನಾನು ಹಳೆಯ ಹಾಡೊಂದನ್ನು ಹಾಡುತ್ತಲಿದ್ದೇನೆ;
ಬಿಸಿಲಕಾವಿಗೆ ನೊಂದು ಸುಖದುಃಖಗಳ ನಡುವೆ ಹಾಡಿಕೊಂಡಿದ್ದೇನೆ.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments