Input license here

ಇತ್ತೀಚಿನ ಪೋಸ್ಟ್‌ಗಳು

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು
ನಿದ್ದೆ ಬರುವಳು ಕದ್ದು ಮಲಗು ಮಗುವೇ

ಜೋ...ಜೋಜೋಜೋ...
ಜೋ...ಜೋಜೋಜೋ...

ಮಲಗು ಚೆಲ್ವಿನ ತೆರೆಯೇ ಮಲಗು ಒಲ್ಮೆಯ ಸೆರೆಯೇ
ಮಲಗು ತೊಟ್ಟಿಲ ಸಿರಿಯೇ ದೇವರಂತೆ
ಮಲಗು ಮುದ್ದಿನ ಗಿಣಿಯೇ ಮಲಗು ಮುತ್ತಿನ ಮಣಿಯೇ
ಮಲಗು ಚಂದಿರನೂರ ಹೋಗುವೆಯಂತೆ ||ಅತ್ತಿತ್ತ||

ಜೋ ಜೋ ಜೋ ಎಂದು ತೊಟ್ಟಿಲನು ತೂಗುವೆನು
ಮಲಗೆನ್ನ ತುಂಟ ಮಗುವೇ
ಜೋ ಜೋ ಜೋ ಎಂದು ತೊಟ್ಟಿಲನು ತೂಗುವೆನು
ಮಲಗೆನ್ನ ಜಾಣ ಮಗುವೇ ||ಅತ್ತಿತ್ತ||

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ
ವೀಣೆ ನುಡಿಸುವರಂತೆ ಸುತ್ತ ನೆರೆದು ||ಅತ್ತಿತ್ತ||

ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ ||ಅತ್ತಿತ್ತ||

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments