ಹೂವರಳುವ ಸಮಯದಲ್ಲಿ
ಹೂವರಳುವ ಸಮಯದಲ್ಲಿ
ತಂಬೆಲರಿನ ಸೀಮೆಯಲ್ಲಿ
ದೂರ ದೂರ ನಾಡಿನಲ್ಲಿ
ತೇಲಿ ಬಂದ ಹಾಡಿನಲ್ಲಿ
-ನಿನ್ನ ನೆನೆದೆನು!
ಬಂಗಾರದ ನಾಡಿನಲ್ಲಿ
ಮಳೆಬಿಲ್ಲಿನ ಅಂಚಿನಲ್ಲಿ
ನಟ್ಟಿರುಳಿನ ಕನಸಿನಲ್ಲಿ
ಹೂವರಳಿದ ಮನಸಿನಲ್ಲಿ
-ಹಾಡ ಕಂಡೆನು!
ನನಗೆ ನಾನೆ ಹಾಡಿಕೊಂಡ
ಬದುಕಿನಲ್ಲಿ ಚೆಲುವ ಕಂಡ
ಒಲವಿನಲ್ಲಿ ಅರಳಿಕೊಂಡ
ಇರುವಂತಿಗೆ ಮೊಗ್ಗಿನಲ್ಲಿ
-ಕನಸ ಕಂಡೆನು!
ಪಿಸುಮಾತಿನ ಹೊರಳಿನಲ್ಲಿ
ಕಣ್ತೆರೆಸುವ ಮೋಡಿಯಲ್ಲಿ
ಹಾಡು ಹೊರಗೆ ಬಂದಿತು;
ಈ ಲೋಕದ ಹೊಲಗಳಲ್ಲಿ
ಆ ಲೋಕದ ನಲಿವು ಪುಟಿದು
ಒಲವು ನಲಿವು ಚೆಲುವು ಮೂಡಿ
-ನನ್ನ ಸೆಳೆದುವು!
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments