Input license here

ಇತ್ತೀಚಿನ ಪೋಸ್ಟ್‌ಗಳು

ಕಿಟಕಿಯ ಬಾಗಿಲು ತೆರೆದಿತ್ತಂದು

ಕಿಟಕಿಯ ಬಾಗಿಲು ತೆರೆದಿತ್ತಂದು
ಸುತ್ತಲು ಕತ್ತಲೆ ಸುರಿದಿತ್ತಂದು
ಚಂದಿರನಡಿಯಲಿ ಮೆರೆದಿತ್ತೊಂದು
ತಾರಗೆ ಬಾನಿನೊಳು

ಮಂಚದ ಮೇಗಡೆ ಅವಳಿಗೆ ನಿದ್ದೆ
ನನಗೋ ಎಚ್ಚರ ಓದುತಿದ್ದೆ
ಬೇಸರವಾಯಿತು ಮಲಗಲು ಎದ್ದೆ
ಎಲ್ಲವು ಸುಮ್ಮನಿರೆ

ಬಂದಿತು ಮುತ್ತನು ಕದಿಯುವ ಬಯಕೆ
ಮೋಸವು ತಿಳಿದರೆ ಮುನಿಯಳೆ ಈಕೆ
ಎನ್ನುವ ಅಂಜಿಕೆ
ಚಂದಿರ, ಜೋಕೆ...ಎಂದೆಚ್ಚರಿಸುತಿರೆ

ತಾರೆಗಳೆಲ್ಲ ನೋಡುವವೆಂದು
ಕಿಟಕಿಯ ಬಾಗಿಲ ಬಂಧಿಸಿ ಬಂದು
ಉರಿಯುವ ದೀಪವು ಅರಿಯುವುದೆಂದು
ಆರಿಸಲೆಣಿಸಿದೆನು

ಕಂಡರೆ ದೀಪವು ಹೇಳುವುದೇನು
ಎಂದೆನ್ನಲು ಮೈ ನಡಗಿದುದೆಲರು
ದೀಪವು ಇನ್ನು ಹೊಸತಿದು ಎಂದು
ಮೌನದಿ ಬೆಳಗಿದುದು

ಮೂಡಣ ಬೆಳಕಿನ ಬಾಗಿಲ ತೆರೆದು
ಬಂದಳು ಉಷೆ ಪನ್ನೀರ್ಮಳೆಗರೆದು
ನನ್ನೊಳು ಇಂದಿರೆ ಏತಕೆ ಎನಲು
ದೀಪವ ನೋಡಿದಳು

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments