Input license here

ಇತ್ತೀಚಿನ ಪೋಸ್ಟ್‌ಗಳು

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲಾ
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು ಮದುವೆಯಿಲ್ಲಾ

ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು
ಇಂತ ಬಾಳಿಗೆ ಒಲವೆ ನಿನ್ನ ಕನಸು

ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರ ಕೇಳಬೇಕು

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ

ಮಗಳ ಮಾತನು ಕೇಳಿ ನಕ್ಕು ಬಿಟ್ಟರು ತಂದೆ
ಒಳಗೆ ನಂದಾದೀಪ ನಂದಿ ಹೋಗ್ಲಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ
ತೆರಳಿದನು ಜೋಯಿಸನು ತಣ್ಣಗಾಗಿ

ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು

ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೆ ಇಂತ ಕಪ್ಪು ಗಂಡು
ಶಾನುಭೋಗರ ಮನೆಯ ತೋರಣವೆ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು

ಶಾನುಭೋಗರ ಮಗಳು ರತ್ನದಂತಹ ಹುಡುಗಿ
ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ
ತಡವಾದರೇನಂತೆ ನಷ್ಟವಿಲ್ಲ

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments