Input license here

ಇತ್ತೀಚಿನ ಪೋಸ್ಟ್‌ಗಳು

ಮಾವು ನಾವು, ಬೇವು ನಾವು

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-
ಹೊಸತು ಬಯಕೆ ನಮ್ಮವು.
ತಳಿರ ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ
ಹೊಳೆಯ ದಿಕ್ಕು ಬದಲಿಸಿ
ಕಾಡ ಕಡಿದು ದಾರಿಮಾಡಿ
ಬೆಟ್ಟಸಾಲ ಕದಲಿಸಿ.

ಹಿಮಾಚಲದ ನೆತ್ತಿಯಲಿ
ಧ್ವಜವನಿಟ್ಟು ಬಂದೆವು;
ಧ್ರುವಗಳಲ್ಲಿ ಹೆಜ್ಜೆಯೂರಿ
ಹೊಸನೆಲೆಗಳ ಕಂಡೆವು

ಬಾನಸೆರೆಯ ಕಲ್ಪಲತೆಗೆ
ನಮ್ಮ ಕಿಡಿಯ ಮುತ್ತಿಗೆ.
ಮುಗಿಯಬಹುದು ನಾಳೆಯೊಳಗೆ
ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ
ಉಟ್ಟ ಸೀರೆ ಸಾಗರ
ಅವಳ ಮುಗಿಲ ತುರುಬಿನಲ್ಲಿ
ಹೆಡೆಯ ತೆರೆದ ನಾಗರ

ಅವಳಾ ಪ್ರೀತಿ ನಮಗೆ ದೀಪ;
ಅವಳ ಕಣ್ಣು ಕಾವಲು.
ಬಿಸಿಲ ತಾಪ, ಮಳೆಯ ಕೋಪ-
ಸಂತೋಷವೆ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ
ಪಯಣವೆಲ್ಲ ಪಾವನ

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments