ಕೊಳದ ಪಕ್ಕದ ಹೊಲದ ಮೈ ತುಂಬ ನಾ ಕಂಡೆ
ಕೊಳದ ಪಕ್ಕದ ಹೊಲದ ಮೈ ತುಂಬ ನಾ ಕಂಡೆ
ಬಿಳಿ ಹಳದಿ ಹೂಗಳನು ಸೇವಂತಿಗೆ
ನೀರ ಮೇಗಣ ಗಾಳಿ ಬೀಸಿತು ನನ ಮೇಲೆ
ಅದರ ಕಂಪಿಗೆ ನಾನು ಮಾರು ಹೋದೆ
ಅಲ್ಲೊಂದು ತಾಣದಲಿ ಜಾಲಿ ಹೂಗಳ ಕಂಡೆ
ಕೆಂಡಸಂಪಿಗೆ ಬಿತ್ತು ನನ್ನ ಮೇಲೆ
ಬಾಂದಳದ ತನಕ ಸೇವಂತಿಗೆಯ ಆಹ್ವಾನ
ಚೆಲುವಿಗಿಂಪಿಗೆ ನಾನು ಕೈಯ ಮುಗಿದೆ
ಒಲವು ದೇವರ ಹೆಸರು ಚೆಲುವು ಹೂವಿನ ಬದುಕು
ಸೇವಂತಿಗೆಯಾ ಬದುಕು ಕಂಪಿನಲ್ಲಿ
ಎಲೆಮರೆಯ ಹಕ್ಕಿ ಹಾಡಾಗುವುದು ಕೋಗಿಲೆ
ಧನ್ಯತೆಯ ಕಾಣುವುದು ಇಂಪಿನಲ್ಲಿ
ಹಕ್ಕಿ ಹಾಡಿನ ನಡುವೆ ಅರಳಿತ್ತು ಹಳದಿ ಹೂ
ಬಿಳಿಯ ಹೂವರಳಿತ್ತು ಸಾಲಿನಲ್ಲಿ
ಕೋಗಿಲೆಯ ಹೊಸ ಹಾಡ ಕೇಳುತ್ತ ಮುನ್ನಡೆದೆ
ನನ್ನ ಬುಟ್ಟಿಯ ತುಂಬ ಸೇವಂತಿಗೆ
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments