ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚಂದ ನಿನಗಾವುದೆಂದು
ನಮ್ಮುರು ಹೊನ್ನೂರು ನಿಮ್ಮೂರು ನವಿಲೂರು
ಚಂದ ನಿನಗಾವುದೆಂದು
ನಮ್ಮೂರು ಚಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ನಮ್ಮೂರ ಮಂಚದಲಿ
ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ
ನಮ್ಮೂರು ಚೆಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ
ಎಂದಳಾಕೆ |ಪಲ್ಲವಿ|
ತವರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ
ಮಲ್ಲಿಗೆಯ ಮೊಗ್ಗುಗಳು ಮುಳ್ಳ ಬೇಲಿಯ ಬರಿಸಿ
ಬಳಕುತಿವೆ ಕಂಪ ಸೂಸಿ
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನುರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ
ನಮ್ಮೂರು ಚೆಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ
ಎಂದಳಾಕೆ
ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ
ಊರ ಬೇಲಿಗೆ ಬಂದು
ನೀವು ನಮ್ಮನು ಕಂಡು ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ
ನಮ್ಮೂರು ಚೆಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ
ಎಂದಳಾಕೆ
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments