ದೀಪದ ಸಾಲಿನ ನಡುವೆ
ದೀಪದ ಸಾಲಿನ ನಡುವೆ
ನಿನ್ನೆ ಸಾಯಂಕಾಲ ಹೊವ ಬೇಡಿದೆ ನೀನು,
ನಾನು ಮಲ್ಲಿಗೆಯನ್ನೆ ತಂದು ಕೊಟ್ಟೆ;
ನನ್ನನೆ ನೋಡುತ್ತ ಹೂವ ಕಟ್ಟಿದೆ ನೀನು,
ತುಂಬಿ ಹೋಯಿತು ನಿನ್ನ ಬೆಳ್ಳಿ ತಟ್ಟೆ.
ಹೂವ ಪರಿಮಯದಲ್ಲಿ ಸಿಕ್ಕಿ ಹೋದೆನು ನಾನು,
ಕಿಟಕಿಯಿಂದೆರಡು ಹನಿ ಒಳಗೆ ಬಿತ್ತು;
ನಿನ್ನ ಮಾಂಗಲ್ಯವನು ಒಮ್ಮೆ ಮುಟ್ಟಿದೆ ನೀನು,
ಫಳಫಳ ಹೊಳೆಯುತಿತ್ತು ಅದರ ಮುತ್ತು.
ನೀನು ಅಪ್ಸರೆಯಲ್ಲ , ಗಂಧರ್ವ ನಾನಲ್ಲ
ನನ್ನನಾಕರ್ಷಿಸಿತು ನಿನ್ನ ಚೆಲುವು;
ಬಾನುಲಿಯ ತುಂಬ ಯಾರದೊ ಹಾಡು ಬಂದಿತ್ತು,
ಹೂ ದಂಡೆಯಾಗಿತ್ತು ನಿನ್ನ ಒಲವು.
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments