ನೀ ಬಂದ ದಾರಿಯಲಿ ಯಾವು ಹೂ ಅರಳಿತ್ತು,
ಯಾವ ಬಣ್ಣದ ಹಕ್ಕಿ ಹಾಡುತಿತ್ತು?
ನೆನಪಿದೆಯೆ ನಿನಗೆ ನೀ ಬಂಡಿಯಿಂದಿಳಿದವಳು
ನನ್ನ ಹತ್ತಿರ ಬಂದು ನಕ್ಕ ಚೆಲುವು?

ನೆನಪುಗಳೆ ಹಾಗೆ; ಕೆಲವಡ್ಡ ದಾರಿಯ ಹಿಡಿದು
ಮರೆಯಾಗುವುದು ಸಹಜ; ಇದುವೆ ಬದುಕು.
ತುಂಬು ಸಂತಸದಿಂದ ನೀನು ಹೇಳಿದ್ದುಂಟು,
'ಯಾವ ಲೋಕದ ಚೆಲಿವೊ ನಮ್ಮ ಒಲವು !'

ನೀ ಮುಡಿದ ಮಲ್ಲಿಗೆಯ ದಂಡೆ ಕಣ್ಣನು ತೆರೆದು
ನನ್ನ ಕಡೆ ನೋಡಿತ್ತು ಒಲವಿನಲ್ಲಿ;
ಸಂಪಿಗೆಯು ಕೂಡ ಅಲ್ಲಿತ್ತದರ ಜೊತೆಯಲ್ಲಿ,
ನಾನು ಹರುಷವ ಕಂಡೆ ಚೆಲುವಿನಲ್ಲಿ.

- ಕೆ ಎಸ್ ನರಸಿಂಹಸ್ವಾಮಿಯವರು