ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲಾ ಬರುವಳೆನ್ನ ಶಾರದೆ
ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ

ಕೋಣೆಯೊಳಗೆ ಬಳೆಯಾ ಸದ್ದು ನಗುವರತ್ತೆ ಬಿದ್ದು ಬಿದ್ದು
ಸುಮ್ಮನಿರಲು ಮಾವನವರು ಒಳಗೆ ಅಕ್ಕ-ಭಾವನವರು
ಎಂದು ತುಂಟ ಹುಡುಗನು ಗುಟ್ಟ ಬಯಲಿಗೆಳೆವನು

ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು
ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತ ಉಂಡು
ದು:ಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ

ಯಾರು ಕದ್ದು ನುಡಿದರೇನು ಊರೇ ಎದ್ದು ಕುಣಿದರೇನು
ಜನರಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮರಾಗ
ಇಂತ ಕೂಗನಳಿಸಿದೆ ಬೆಳಗಿ ಬದುಕ ಹರಸಿದೆ
ಇಂದೇ ಅದಕೆ ಕರೆವುದು ನನ್ನ ಹುಡುಗಿ ಎನುವುದು
ಹೂವ ಮುಡಿಸಿ ನಗುವುದು ಅಪ್ಪಿ ಮುತ್ತನಿಡುವುದು

ಬಾರೆ ನನ್ನ ಶಾರದೆ ಅತ್ತ ನೋಡದೆ
ಬಾರೆ ನನ್ನ ಶಾರದೆ ಅತ್ತ ನೋಡದೆ
ಬಾರೆ ನನ್ನ ಶಾರದೆ ಅತ್ತ ನೋಡದೆ

- ಕೆ. ಎಸ್. ನರಸಿಂಹಸ್ವಾಮಿಯವರು.