ಮೊಗ್ಗು ಅರಳುವುದನ್ನು ನಾನು ನೋಡಿದ್ದೇನೆ,
ಹಕ್ಕಿ ಹಾಡುವುದನ್ನು ನಾನು ಕೇಳಿದ್ದೇನೆ,
ತುಂಬ ಓದಿದ್ದೆನೆ ತುಂಬಾ ಬರೆದಿದ್ದೆನೆ,
ಚೆಲುವೆಂದು ಒಲವೆಂದು ನಾನು ಕುಣಿದಿದ್ದೇನೆ.
ಕವಿಯಾಗಿ ನಕ್ಷತ್ರಗಳನು ಎಣಿಸಿದ್ದೇನೆ,
ನನ್ನ ಲೆಕ್ಕವು ತಪ್ಪಿ ತುಂಬ ನೊಂದಿದ್ದೆನೆ,
ಒಳ್ಳೊಳ್ಳೆ ಸಂಗೀತಗಳನು ಕೇಳಿದ್ದೇನೆ,
ಸ್ನೇಹಿತರ ಜೊತೆಯಲ್ಲಿ ಆಟವಾಡಿದ್ದೇನೆ.
ಹಳೆಯ ಕವಿಗಳ ಶುಭದ ಹಾದಿ ಹಿಡಿದಿದ್ದೇನೆ,
ನೊಂದ ಮಂದಿಯ ಕೈಗೆ ದೀಪ ಕೊಟ್ಟಿದ್ದೇನೆ,
ಅವರ ಪಯಣಕ್ಕೆ ಶುಭಮಸ್ತು ಎಂದಿದ್ದೇನೆ,
ಹೂದೋಟದಲ್ಲಿ ಹೊರಳಾಡಿ ಬಂದಿದ್ದೇನೆ.
ಎಲ್ಲರೊಡನೊಂದಾಗಿ ಬದುಕ ಬಯಸಿದ್ದೇನೆ,
ಚೆಲುವನ್ನು ಮುಟ್ಟದೆಯೆ ಆರಾಧಿಸಿದ್ದೇನೆ,
ನುಡಿದಂತೆ ನಡೆಯಲೆತ್ನಿಸಲು ಶ್ರಮಿಸಿದ್ದೇನೆ,
ಎಲ್ಲರಿಗೆ ಕೈಕುಲುಕಿ ಶುಭವ ಕೋರಿದ್ದೆನೆ.
-ಕೆ ಎಸ್ ನರಸಿಂಹಸ್ವಾಮಿಯವರು.
0 Comments