Input license here

ಇತ್ತೀಚಿನ ಪೋಸ್ಟ್‌ಗಳು

ಎಲ್ಲಿ ಕತ್ತಲೆಯಿತ್ತೊ ಅಲ್ಲಿ ತನ್ನಿರಿ ಬೆಳಕ

 ಎಲ್ಲಿ ಕತ್ತಲೆಯಿತ್ತೊ ಅಲ್ಲಿ ತನ್ನಿರಿ ಬೆಳಕ
ಹಸಿದ ಹೊಟ್ಟೆಯ ಮೇಲೆ ಬೆಳ್ದಿಂಗಳನು ಚೆಲ್ಲಿ
ಮುಂಬರಿವ ನಮಗೆ ಶುಭವನ್ನು ತರಲಿ;
ಮಲಗಿದರೆ ಕನಸು, ಎದ್ದರೆ ಪಯಣ : ಹೀಗಿದೆ ಬದುಕು
ಹಾದಿಯುದ್ದಕು ಹೂವ ಚಲ್ಲುತಿರಲಿ.

ತುಟಿ ಒಣದವರ ಹಾಡನ್ನು ಕೇಳುವಿರೇನು ?
ಆದರೂ ಹಾಡು ಬರುವುದು ಸಂಜೆಯೊಳಗಾಗಿ
ಕನಸಿನ ಪರಂಪರೆಯ ನೆಯ್ದು ;
ಹಾದಿಬೀದಿಗಳಲ್ಲಿ ಬತ್ತಲೆ ಮಗು ಅತ್ತು
ಸಂಜೆಯಾಯಿತು ಎಂಬ ಚಿಂತನೆಯಲಿ.

ಕೆರೆ ಬತ್ತಿದಾಗ ಕಣ್ಣಲ್ಲಿ ನೀರು ಬರುವುದು
ರೊಕ್ಕವನು ಕೊಟ್ಟು ಕೊಳ್ಳುವ ಸರಕೆ ಸಂತೋಷ ?
ಸಂಗೀತಕ್ಕೆ ಬೇಕು ಶ್ರುತಿ, ಲಯ, ಆಲಾಪನೆ
ಹಸಿವ ಹಾಡುವುದೆಂತು, ತಾಳವೆಲ್ಲಿವೆ ಅದಕೆ ?

ಬೀದಿ ದೀಪದ ಕೆಳಗೆ ಸತ್ತ ನಾಯಿಯ ಸುತ್ತ
ಹತ್ತಾರು ಮಕ್ಕಳು ಮರಿ ;
ಬೀದಿನಲ್ಲಿಯ ತುಟಿಗೆ ಭೃಂಗ ಮುತ್ತಿಕ್ಕುವುದು.
ಕುಡಿವ ನೀರಿಗೆ ಸಹಿತ ಕಷ್ಟವಾಗಿರುವಾಗ
ಯಾವ ರಾಗದಿ ಹಾಡಿದರೆ ಕೊಡ ತುಂಬುವುದು ?
ಬಾಯಿ ತುಂಬುವ ತನಕ ಹಾಡು ತುಂಬುವುದಿಲ್ಲ.

ದೇಗುಲ ಬಾಗಿಲಲಿ ಮಂತ್ರಾಕ್ಷತೆಯ ಚೆಲ್ಲಿ
ಹೊರಟು ಹೋಗಿದ್ದಾರೆ ನಂಬುವ ಜನ;
ಧಾತು - ಈಶ್ವರಗಳಲಿ ಕ್ಷಾಮ ಬಂದಿತ್ತೆಂದು
ಅಜ್ಜಯ್ಯ ಹಾಡುವನು ಮರಿಮಗನಿಗೆ.
ಈಗ ಎಲ್ಲೆಲ್ಲು ಹಾಹಾಕಾರವೆದ್ದಿಹುದು,
ಈ ಅಶಾಂತಿಯೇ ನಿಮಗೆ ಎಲ್ಲ ಹಾಡು.

ಯಾವ ಹಾಡನು ನೀವು ಕೇಳಬಯಸುತ್ತೀರಿ,
ಹಾಡು ಕೇಳುವುದಷ್ಟೆ ಸಂತೋಷವೆ ?
ಹಾಡು, ಗೋಡೆಗೆ ಒರಗು, ಕಣ್ಣು ಮುಚ್ಚಿಕೊ
ಆಗ ಬರುವುದು ಬುದ್ದಿ!

ಕೆಲವರಿಗೆ ಹಾಡು ಬೇಕಂತೆ, ಕೇಳದ ಒಡನೆ
ನಿದ್ದೆ ಬರಬೇಕಂತೆ! ಅದು ಎಲ್ಲಿ ಸಿಕ್ಕುವುದು ?
ಬಾಂದಳದ ತನಕ ಕ್ಯೂ ಬೆಳೆದಿರುವುದು,
ತಂತಿಗಳ ಕಿತ್ತ ತಂಬೂರಿಯಾಯಿತು ಹಾಡು!

ನೊಂದ ಜೀವಕ್ಕೆ ಬೇಕಾದ್ದು ಸಿರಿಹಾಡು. ಇಂಪಾದ ಹಾಡು
ಚೆಲುವು ಸೂಸುವ ಹಾಡು, ಭಾವಪೂರ್ಣ ಹಾಡು;
ದುರ್ಭಿಕ್ಷದಲಿ ನಾವದನು ಪಡೆಯುವುದು ಹೇಗೆ ?
ಯಾರೊ ಅತ್ತಂತಾಯ್ತು ಹಾಡು ಮುಗಿದು.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments