ಹುಟ್ಟಿದ್ ಮಳೇ ಹಾಳಾಗ್ ಹೋಯ್ತು,
ಸುಮ್ನೆ ಗುಡುಗಿನ್ ಕೋಡಿ.-
ಅಕ್ಕಿ ಬೆಲೇ ಏರ್ತಾ ಹೋಯ್ತು
ದುಡ್ಡಿನ್ ಮೊಕಾ ನೋಡಿ.
ಅಕ್ಕೀಗಿಂತ ಅಲ್ಲಿದ್ ಕಲ್ಲೆ
ಮುತ್ನಂಗಿತ್ತು, ತಣ್ಗೆ !
ಕಟ್ಕೊಂಡೋಳ್ಗಿಂತಿಟ್ಕೊಂಡೋಳೇ
ಸುಂದ್ರೇ ಅಲ್ವೆ ಕಣ್ಗೆ !
ಒಲೇ ಕುರ್ಚೀಲನ್ನದ್ ತಪ್ಲೆ
ತಲೆ ತೂಗ್ತಾ ಇತ್ತು ;
ಅಕ್ಕೀ ಮೊಕಾ ನೋಡಿದ್ ಕೂಡ್ಲೆ
ಕುಣ್ಯೋದ್ ನಿಂತೇಹೋಯ್ತು !
ಅಕ್ಕಿ ಮೊಕಾ ಚಿಕ್ದಾಗ್ ಹೋಯ್ತು
ತಂದೋರ್ ತೊಂದ್ರೆ ನೋಡಿ ;
ನಕ್ಕೋರ್ ಮೊಕ ಮೂರ್ಕಾಸಾಯ್ತು
ಇದ್ದೋರ್ ಸಂಕ್ಟಾ ನೋಡಿ.
ಒಲೇ ಊದಿ - ತಲೇಗ್ ಬೂದಿ -
ಅಂತೂ 'ಅನ್ನಾ' ಅಂದ್ರು ;
ಕಸಾ ಗುಡ್ಸೀ ತಟ್ಟೇ ಹಾಕೀ
ಉಟಕ್ಕೆಲ್ಲಾ ಬಂದ್ರು.
ತೊಂಬತ್ತೊಂಬತ್ ಅಕ್ಕಿ ಬೆಂದ್ರೂ
ಬೆಂದಿರ್ಲಿಲ್ಲ ಕಲ್ಲು !
ಉಣ್ತಾ ಇದ್ದೋರ್ ಹೊಡಿಯಾಕ್ ಬಂದ್ರೂ..
ಕಲ್ - ಕಡಿದಿತ್ತು ಹಲ್ಲು !
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments