ಮಳೆಯೊಳಗೆ ಬಂದುದೇಕೆನಲು ಮಾತಾಡಿದಳೆ ?-
ಮಿಂಚುಗಳು ದಾರಿದಾರಿಯಲಿ.
ಮತ್ತೊಮ್ಮೆ ಏಕೆಂದು ಕೇಳಿದರೆ ನುಡಿದಳೆ ?-
ದೀಪವಿತ್ತೊಂದು - ಮೂಲೆಯಲಿ.
ತಾಯಿದ್ದು ತಬ್ಬಲಿಯೆ ? ಪಾಪಿಗಳು ! ಇವರೇಕೆ
ಹಬ್ಬದಲಿ ಕಳುಹಿದರು ಹೆಣ್ಣುಮಗಳ ?
ಓಡಿಬಂದಳೊ ಕಾಣೆ ! ಹೇಳಿಬಂದಳೊ ಕಾಣೆ !
ಹೀಗೆ ಫಲಿಸಿತೆ ನನ್ನ - ಅವರ ಜಗಳ ?
ಒಂದಾಗಿ ಎರಡಾಗಿ ಮುಂಗುರುಳ ಬಲೆಯಿಂದ
ಮಳೆಯ ಹನಿ ಕೆಳಗುರುಳುತಿರಲು ;
ಕಂಡರೂ ಕಾಣದೆಯೆ ಒಂದು ಮಾತಾಡದೆಯೆ
ಒಳಗೆ ಬಂದಳು ; ಹೊರಗೆ ಸೋನೆಯಿರುಳು.
ಹತ್ತಿರವೆ ಬಂದಳು ; ಒತ್ತಿನಲೆ ಕುಳಿತಳು
ದೊಡ್ದ ಕಣ್ಗಳ ದೊಡ್ಡದಾಗಿ ತೆರೆದು ;
ಕಣ್ಣಿನಲಿ ಮಿಂಚಿನೊಲು ಬಂದ ಕಾರಣವಿರಲು
ಮಾತಾಡದೆ ಹೆಣ್ಣು ಸುಮ್ಮನಿಹಳು.
ನೂರು ಮಾತಿಗೆ ತಾನು 'ಅಹುದು' ಎಂದಳು ಚೆನ್ನೆ
ಒಡನೆಯೇ ಕೊರಲೆತ್ತಿ 'ಇಲ್ಲ' ಎಂದು ;
ದುಂಡು ಕಂಬನಿಯೊಂದನಿಳಿಸಿದಳು ಕೆನ್ನೆಯಲಿ
ತುಟಿಯ ಮೇಲೊಂದೆರಡು ಮುತ್ತನಿಡಲು.
ಮಳೆಯೊಳಗೆ ಬಂದುದೇಕೆನಲು ಮಾತಾಡಿದಳೆ ?-
ಮಿಂಚುಗಳು ದಾರಿದಾರಿಯಲಿ.
ಮತ್ತೊಮ್ಮೆ ಏಕೆಂದು ಕೇಳಿದರೆ ನುಡಿದಳೆ ?-
ಪ್ರೇಮ ಅರಳಿತ್ತು ಮೌನದಲಿ.
-ಕೆ ಎಸ್ ನರಸಿಂಹಸ್ವಾಮಿಯವರು.
0 Comments