Input license here

ಇತ್ತೀಚಿನ ಪೋಸ್ಟ್‌ಗಳು

ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?

 ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?
ಕಂಡ ನೋಟಗಳೆಲ್ಲ ರೇಷ್ಮೆ ವಸ್ತ್ರದ ಮೇಲೆ
ಮುತ್ತ ಚೆಲ್ಲಿದ ಹಾಗೆ ! ಕಣ್ಣಿರುವ ತನಕ
ನೋಡಿದ್ದಾಯ್ತು ಅದನಿದನು : ಬೇಕಾದ್ದು, ಬೇಡದ್ದು.
ನೋಟ ಒಳಮುಖವಾಯ್ತು, ಅಲ್ಲಿ ಕಂಡದ್ದೇನು?
ಚೆಂಜೇನು ಕಾಣಿಸಿತು ಗೂಡಿನ ಚಿಟ್ಟಿಜೇನು,
ಅಂಚೆ ಪೆಟ್ಟಿಗೆಯಲ್ಲಿ ಅದರದ್ದೆ ಝಂಕಾರ.
ಅರಿಯದೆಯೆ ಕೈಯಿಟ್ಟರಾಗ ಅವು ಕಚ್ಚುವುವು :
ಕಚ್ಚಿದ ಬೆರಳಿಗುಂಟು ಅಂಥಿಂಥ ಔಷಧ.

ಕಣ್ಣೇ ಹೋಯಿತೆಂದು ನನಗೆ ಬಂದಿದೆ ಚಿಂತೆ.
ಒಳಗಣ್ಣು ಕವಿತೆಯನು ನೇಯುವುವು ಒಳಗೊಳಗೆ :
ಪ್ರಾಸಗಳು ಬಂದು ನಿಲ್ಲುವುವು ಮಲ್ಲಿಗೆಯಂತೆ.
ಬಿರುಗಾಳಿಯಲ್ಲಿ ಉಯ್ಯಾಲೆಯಾಡುವ ಹುಡುಗಿ
ನನ್ನನ್ನು ಕಂಡು ನಕ್ಕಂತೆ ತೋರಿತು ನನಗೆ !
ಒಂದೊಂದು ಪಂಕ್ತಿಗೂ ಛಂದಸ್ಸು ಉಂಟು,
ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೆ ಇಲ್ಲ ;
ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ,
ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments