Input license here

ಇತ್ತೀಚಿನ ಪೋಸ್ಟ್‌ಗಳು

ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ

 ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ
ತಂಬೆಲರಲಿ ಹಬ್ಬುತ್ತಿದೆ ಕೋಗಿಲೆ ಸಂಗೀತ
ಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ
ತರು ಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರ ||ಪ||

ಗಿರಿ ನದಿಗಳನಾವರಿಸಿದೆ ಹೊಸ ಚೇತನದುಸಿರು
ಬನ ಬನದಲಿ ಅಚ್ಚಾಗಿದೆ ಹೊಸ ವರುಷದ ಹೆಸರು
ಬಳುಕುವ ಎಲೆ ಚೆಲುವಿನ ಬಲೆ ಸಿರಿಯುಕ್ಕುವ ನೋಟ
ತಿಳಿಗೊಳದಲಿ ಹೊಂದಾವರೆ ಹೂವರಳಿದ ತೋಟ ||ಪಲ್ಲವ||

ಬಾ ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ
ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ
ಮಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ
ಮಧು ಮಾಸವೆ ಅಡಿ ಇಡುತಿದೆ ಹೊಸ ವರುಷದ ಬೆಳೆಗೆ ||ಪಲ್ಲವ||

ನಲ್ಲೆಯ ತುಟಿ ಅದುರುತ್ತಿದೆ ನಲ್ಲನ ತುಟಿಯಲ್ಲಿ
ನಸುಗೆಂಪಿನ ಉಂಗುರವಿದೆ ಆಕೆಯ ಬೆರಳಲ್ಲಿ
ಮಲ್ಲಿಗೆ ಹೂ ಪರಿಮಳವಿದೆ ತುಂಬಿದ ಹೆರಳಲ್ಲಿ
ಹೊಸ ವರುಷದ ಹೊಸ ಹಾಡಿದೆ ಆಕೆಯ ಕೊರಳಲ್ಲಿ ||ಪಲ್ಲವ||

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments