Input license here

ಇತ್ತೀಚಿನ ಪೋಸ್ಟ್‌ಗಳು

ನಡೆದಂತೆ ದಾರಿ ಬೆಳೆಯುವುದು ತೋಟಗಳಾಚೆ

 ನಡೆದಂತೆ ದಾರಿ ಬೆಳೆಯುವುದು ತೋಟಗಳಾಚೆ
ಹಕ್ಕಿಗಳು ಹಾರಿ ಹೋಗುವುವು ನೆತ್ತಿಯ ಮೇಲೆ
ಇತ್ತ ಬೆಳಕೂ ಅಲ್ಲ, ಅತ್ತ ಕತ್ತಲೆಯಲ್ಲ;
ಈ ಪರಿಸ್ಥಿಯಲ್ಲಿ ಪಯಣ ಸಾಗುತ್ತಲಿದೆ.

ಅದರಾಚೆಗೊಂದು ನೆಲೆಯಿಹುದೆಂದು ಹೇಳುವರು
ಅಲ್ಲಿ ಬೆಳ್ಳಂಬೆಳಕು, ಹಕ್ಕಿಗಳ ಸಿರಿಹಾಡು
ಕೊಳದ ಕಮಲಗಳಲ್ಲಿ ತುಂಬಿಗಳ ಹಾರಾಟ
ಅದರ ಮೆಟ್ಟಿಲ ಮೇಲೆ ಸೀರೆ ಒಗೆಯುವ ನೀರೆ.
ಬಿಂದಿಗೆಯ ಹೊತ್ತ ಚೆಲುವೆಯರು ಬರುವರು ಮನೆಗೆ
ಇದರಾಚೆಗೆಲ್ಲೋ ಒಂದು ನೆರಳಿನಲಿ ನವಿಲು
ಗರಿಗೆದರಿ ನರ್ತಿಸುತ್ತಿಹುದು. ಪುಟ ಮಗುಚಿ ನೋಡಿದರೆ
ಕಣ್ಗೆ ಬೀಳುವುದಿಂದು ತುಂಬ ಬೇರೆಯ ಚಿತ್ರ.

ಯಾರೊ ಸತ್ತರು, ಅದಕೆ ಇನ್ನು ಯಾರೊ ಅತ್ತರು
ಧಾರೆಧಾರೆಗಳಲ್ಲಿ ಇಳಿಯುತಿದೆ ಕಣ್ಣ ಹನಿ
ಸುಖವೊ ದುಃಖವೊ ಒದಗಿ ತಿಳಿಬಾಳ ಕಲಕುವುದು
ಮಂದಿ ಹುಡುಕುವರು ಸಂತೋಷವನು ದುಃಖದಲಿ.

ಮಳೆಬಿಲ್ಲು ಏತರ ಸಮಾಧಾನ? ಹೊಸ ಹಾಡು
ಎಲ್ಲಿಗೊಯ್ಯುವುದು ಎಂದೆನ್ನ ಕೇಳುವಿರಲ್ಲ,
ಏನ ಹೇಳಲಿ? ನಗೆಯ ಮೂಲಗಳಲ್ಲಿ ನಮಗೆ
ಸಿಕ್ಕುವುದೇನು? ಹಗಲು ರಾತ್ರಿಗಳಲ್ಲಿ ಹುಡಕುತ್ತ
ಬಂದಿಹೆವು. ಎಷ್ಟು ತಿಳಿದರೆ ಅಷ್ಟು ಚೆಲುವು;
ಉಳಿದದ್ದಲ್ಲ ಅದರ ಪರಿಚಾರಿಕೆಗೆ ನಿಂತ ನಲಿವು.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments