Input license here

ಇತ್ತೀಚಿನ ಪೋಸ್ಟ್‌ಗಳು

ನಿನ್ನ ಹಾಡಿಗೆ ನಾನು ತಾಳ ಹಾಕಿದ ಸಂಜೆ

 ನಿನ್ನ ಹಾಡಿಗೆ ನಾನು ತಾಳ ಹಾಕಿದ ಸಂಜೆ
ಮುಗಿಲು ಕೆಂಪಾಗಿತ್ತು ಬಾಂದಳದಲಿ;
ನೀನು ಹಾಡನು ಮುಗಿಸಿ ದೀಪ ಹಾಕಲು ಎದ್ದೆ
ತುಂಬ ಕತ್ತಲೆಯಿತ್ತು ಕೋಣೆಗಳಲಿ.

ಮಳೆ ಬಂತು, ದೇಪ ಬರಲೇ ಇಲ್ಲ , ನಾನೆದ್ದೆ
ತಂಬೂರಿಯನು ಒಂದು ಮೂಲೆಗಿರಿಸಿ;
ಸದ್ದಿರದ ತಂತಿಗಳ ಮೇಲೆ ತಂಗಿತು ಮೌನ
ಹೊತ್ತಿಕೊಂಡಿತು ದೀಪ ಕೋಣೆಗಳಲಿ.

ನಿನ್ನ ಕಂಬನಿ ಮಿನುಗಿ ತಂಬೂರು ಝಂಕರಿಸಿ
ಆರಿಹೋಯಿತು ದೀಪ ಹಣತೆಗಳಲಿ;
ಹೊಸತಾದ ಹಾಡು ಕೋಣೆಯ ತುಂಬಿಕೊಂಡಿರಲು
ಬೆಳಕು ಹೊಳೆಯಿತು ಗೋಡೆಕನ್ನಡಿಯಲಿ.

ಚೆಲುವ ಹಾಡಿಗೆ ಒಲವು ಸೇರಿಕೊಂಡು ಬೇಗ
ತುಂಬಿಕೊಂಡಿತು ನಲಿವು ಹೃದಯಗಳಲಿ;
ಬಾನಿನಂಗಳದಲ್ಲಿ ನಕ್ಷತ್ರಗಳು ಹೊಳೆದು
ಹೂವು ಉದುರಿತು ಊರ ಬೇಲಿಗಳಲಿ.

ಬೆಳಗಾಗ ಮನೆಯ ಬಿಟ್ಟವರು ಇರುಳಿಗೆ ಬಂದು
ಚಪ್ಪಾಳೆ ತಟ್ಟಿದರು ನಿನ್ನ ದನಿಗೆ;
ನೀನು ಮೈಮುರಿದೆದ್ದು ನಿನ್ನ ಕೋಣೆಗೆ ಹೋದೆ
ಮುಗಿದ ಹಾಡಿನ ಅರ್ಧ ಬೆಳಕಿನೊಳಗೆ.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments