Input license here

ಇತ್ತೀಚಿನ ಪೋಸ್ಟ್‌ಗಳು

ನನ್ನವಳು ನನ್ನೆದೆಯ ಹೊನ್ನಾಡನಾಳುವಳು

 ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||ಪ||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ...
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ||ನನ್ನವಳು||

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ||ನನ್ನವಳು||

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ ||ನನ್ನವಳು||

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments