Input license here

ಇತ್ತೀಚಿನ ಪೋಸ್ಟ್‌ಗಳು

ನಾನು ಬೆಳಕಿನು ಕುರಿತು ಹಾಡಬಂದಿದ್ದೇನೆ,

 ನಾನು ಬೆಳಕಿನು ಕುರಿತು ಹಾಡಬಂದಿದ್ದೇನೆ,
ನೀವು ಕತ್ತಲೆಯತ್ತ ನನ್ನ ಸೆಳೆವಿರದೇಕೆ?
ಮೊತ್ತ ಮೊದಲಿತ್ತು ಕತ್ತಲೆಯೆ ; ಆಮೇಲೆಂದೊ
ಬೆಳಕು ಹುಟ್ಟಿತು ಬೆಳ್ಳಿ ಗೆರೆಯಾಗಿ ಮೂಡಲಲಿ.

ಕಿಕ್ಕಿರಿದ ಚಪ್ಪರದ ತುಂಬಾ ನಡೆಯಿತು ಭಜನೆ,
ಬೀದಿ ದೀಪಗಳಿಂದ ಹುಣ್ಣಿಮೆಯ ರಾತ್ರಿಯಲಿ
ಬೆಳಕ ಸಲುವಾಗಿ ; ಈ ಬೆಳಕೆನ್ನುವುದು ಕೂಡ
ಭ್ರಮೆಯೆಂದವರ ನಾನು ಹಿಂದೆ ಕಂಡಿದ್ದೇನೆ.

ಸಪ್ತರ್ಷಿ ಮಂಡಲ ಕೆಳಗೆ ನಿಂತಿದ್ದೇನೆ
ಚಂದ್ರರೋಹಿಣಿಯರಂತರವನ್ನು ಅಳೆಯುತ್ತ ;
ಚಂದ್ರನಲ್ಲಿಹ ಮಣ್ಣನಿವರು ತಂದಿದ್ದಾರೆ
ವರುಷಗಳ ಕಾಲ ಹೋರಾಡಿ ಪ್ರಕೃತಿಯ ಒಡನೆ.

ಹಸಿದವರ ಕಣ್ಬೆಳಕು ಏಕೋ ಮಂಕಾಗುತಿದೆ
ಮತ್ತೆ ತೆರೆ ಬೀಳಲಿದೆ ನಾಟಕ ಮುಗಿವ ಮೊದಲೆ ;
ಗುಡಿಸಿಲಲಿ ತಪ್ಪಲೆಯ ಅನ್ನ ಕೆದಕಿದ್ದಾಳೆ
ಎಂಬತ್ತು ವರುಷಗಳ ಮುದುಕಿ ಬೆಂಕಿಯ ಮುಂದೆ.

ಅವಳ ಕೆನ್ನೆಯ ಕಡೆಗೆ ಒಲೆಯ ಕಿಡಿ ಹಾರುತಿದೆ
ಹಳೆಯ ಕನ್ನಡಿಯಲ್ಲಿ ನೋಡಿಕೊಂಡಿದ್ದಾಳೆ-
ತನ್ನ ಗತವೈಭವದ ಸಂಪೂರ್ಣ ಚಿತ್ರವನು,
ಈ ಕೆನ್ನೆಗಿತ್ತ ಆ ಮುತ್ತು ಕನಸಾದುದನು.

ಒಂದೊಂದು ಹೂವು ಒಂದೊಂದು ದೀಪದ ಹಾಗೆ,
ಹಣತೆಗಳ ತೇಲಿ ಬಿಟ್ಟಿದ್ದೇನೆ ಹೊಳೆಯಲ್ಲಿ ;
ಬೆಂಕಿಯಿಲ್ಲದೆ ಅನ್ನವಿಲ್ಲ ; ಬೆಳಕಿಲ್ಲದೆಯೆ
ಬೆಂಕಿಯೂ ಇಲ್ಲ . ಇದೆ ಬೆಳಕಿನ ಹಾಡು.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments